ಧಾರವಾಡ: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಅವಘಡಗಳು ಸಂಭವಿಸುತ್ತಿವೆ.
ಕೊಟಬಾಗಿ - ಜಿರಗೆವಾಡ ಗ್ರಾಮಕ್ಕೆ ತೆರಳುವ ಬಸ್ವೊಂದು ಇಕ್ಕಟ್ಟಾದ ರಸ್ತೆಯಲ್ಲಿ ದಾಟಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದಿದೆ. ಧಾರವಾಡ ತಾಲೂಕಿನ ಹಂಗರಕಿ ರಸ್ತೆ ಬಳಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಬಸ್ನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಜಿಲ್ಲೆಯ ಅಳ್ನಾವರ ತಾಲೂಕಿನ ಹುಲಿಕೇರಿ ಗ್ರಾಮದ ಇಂದಿರಮ್ಮನ ಕೆರೆ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಭೂ ಕೊರೆತ ಉಂಟಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಧಾರವಾಡ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ವಿ.ಮಂಜುಲ ಅವರು ಕೆರೆಗೆ ಹಾಗೂ ಅಳ್ನಾವರ ಪಟ್ಟಣದ ದೇಸಾಯಿ ಚಾಳ, ತಿಲಕ್ ನಗರ, ಕಾಳೆ ಪ್ಲಾಟ್, ಅಮೃತ ನಗರ ಮೊದಲಾದ ಪ್ರದೇಶಗಳಿಗೆ ಹಾಗೂ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದರು. ಅಲ್ಲದೇ ಸ್ಥಳೀಯರಿಗೆ ಅಗತ್ಯವಿರುವ ಪರಿಹಾರ ಕೇಂದ್ರ, ಪ್ರಥಮ ಚಿಕಿತ್ಸಾ ಘಟಕ ಪ್ರಾರಂಭಿಸಲು ಸೂಚನೆ ನೀಡಿದ್ದಾರೆ.
ಕೆಲವೆಡೆ ಜನರು ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದು ಕೊಳ್ಳುತ್ತಿದ್ದು, ಅವರಿಗೆ ಜಿಲ್ಲಾಡಳಿತ ಸಕಲ ವ್ಯವಸ್ಥೆ ಮಾಡಿದೆ. ಜಿಲ್ಲಾಡಳಿತದ ಜೊತೆಗೆ ಖಾಸಗಿ ಸಂಘ-ಸಂಸ್ಥೆಗಳು ಸಹ ಕೈಜೋಡಿಸಿವೆ. ಇದಕ್ಕೆ ಪೂರಕ ಎಂಬಂತೆ ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಕೊ ಆಪರೇಟಿವ್ ಲಿಮಿಟೆಡ್ ಇವರ ವತಿಯಿಂದ ಧಾರವಾಡ ತಾಲೂಕು ಹಾರೋಬೆಳವಡಿ ಗ್ರಾಮದಲ್ಲಿ ಅತಿವೃಷ್ಟಿಯಿಂದ ನೊಂದವರಿಗೆ ಶುದ್ಧ ಕುಡಿಯುವ ನೀರು, ಕೇಕ್, ಬಿಸ್ಕತ್, ಟೋಸ್ಟ್ ಗಳನ್ನು ವಿತರಿಸಲಾಗಿದೆ.