ಧಾರವಾಡ : ಉಕ್ರೇನ್ನಲ್ಲಿ ಧಾರವಾಡ ಜಿಲ್ಲೆಯ ಮತ್ತೋರ್ವ ವಿದ್ಯಾರ್ಥಿನಿ ಸಿಲುಕಿಕೊಂಡಿದ್ದಾರೆ. ಧಾರವಾಡದ ಮೆಹಬೂಬನಗರದ ವಿದ್ಯಾರ್ಥಿನಿ ಫೌಜಿಯಾ ಮುಲ್ಲಾ ಉಕ್ರೇನ್ನಲ್ಲಿರುವ ವಿದ್ಯಾರ್ಥಿನಿ. ಮಗಳು ನಿನ್ನೆಯಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಪೋಷಕರು ಆತಂಕಗೊಂಡಿದ್ದಾರೆ.
ಫೌಜಿಯಾ ಮುಲ್ಲಾ ಪೋಷಕರಿಗೆ ನಿನ್ನೆ ಕಾಲ್ ಮಾಡಿ ಆರಾಮಾಗಿ ಇದ್ದೇನೆ, ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದೇವೆ. ನಮ್ಮನ್ನು ಬೇರೆ ಕಡೆ ಸ್ಥಳಾಂತರ ಮಾಡೋದಾಗಿ ಭಾರತದ ರಾಯಭಾರಿ ಕಚೇರಿ ಹೇಳಿದೆ ಎಂದು ತಿಳಿಸಿದ್ದರು. ನಿನ್ನೆ ಸಂಜೆಯೇ ಫೌಜಿಯಾ ಕೊನೆಯದಾಗಿ ಕರೆ ಮಾಡಿರುವುದು.
ಫೌಜಿಯಾ ಬರುವ ತಯಾರಿಯಲ್ಲಿದ್ದಾರೆ ಎಂದು ಪಾಲಕರು ಹೇಳುತ್ತಿದ್ದಾರೆ. ನಮ್ಮ ಮಕ್ಕಳು ಬಂದು ಮುಟ್ಟಿದರೆ ಸಾಕು. ನಮ್ಮ ರಾಜ್ಯದ ಅನೇಕರು ಜೊತೆಯಲ್ಲಿದ್ದಾರಂತೆ.
ಟರ್ನಾಪಿಲ್ ನಗರದಲ್ಲಿ ಸಿಲುಕಿರೋ ಮಗಳು ಸೇರಿ ಹಲವರು 8 ದಿನಕ್ಕೆ ಆಗುವಷ್ಟು ಆಹಾರ ತಂದಿಟ್ಟುಕೊಂಡಿದ್ದಾರೆ. ಅವರು ಬಂದೇ ಬರುತ್ತಾರೆ, ಆದರೂ ನಮಗೆ ಆತಂಕ ಇದೆ ಎಂದು ಪೋಷಕರು ತಿಳಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್ನಲ್ಲಿ ತುಮಕೂರು ವಿದ್ಯಾರ್ಥಿನಿ.. ಮಗಳನ್ನು ನೆನೆದು ಪೋಷಕರ ಕಣ್ಣೀರು..
ಫೌಜಿಯಾ ಮುಲ್ಲಾ ಎಂಬಿಬಿಎಸ್ನ 2ನೇ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಡಿಸೆಂಬರ್ನಲ್ಲಿ ಉಕ್ರೇನ್ಗೆ ಹೋಗಿದ್ದರು. ಕತಾರ ಏರಲೈನ್ಸ್‌ನಲ್ಲಿ ಟಿಕೆಟ್ ಸಹ ಬುಕ್ ಮಾಡಿದ್ದಳು. ಅವಳು ದೇಶಕ್ಕೆ ವಾಪಸ್ ಬರಬೇಕಿತ್ತು. ಆದರೆ, ಯುದ್ಧ ಘೋಷಣೆಯಾದ ಕಾರಣ ವಿಮಾನ ಹಾರಾಟ ನಿಂತಿದೆ.
ಹೀಗಾಗಿ, ಅವಳು ಬರೋದು ಕ್ಯಾನ್ಸಲ್ ಆಯ್ತು. ಈಗ ಅವಳನ್ನು ಸರ್ಕಾರ ಸುರಕ್ಷಿತವಾಗಿ ಕರೆ ತರಲಿದೆ ಎನ್ನುವ ವಿಶ್ವಾಸ ನಮಗಿದೆ. ಆದರೂ ಅವಳು ಮನೆ ಸೇರೋವರೆಗೂ ಆತಂಕ ತಪ್ಪಿದ್ದಲ್ಲ ಎಂದು ತಮ್ಮ ಆತಂಕ ವ್ಯಕ್ತಪಡಿಸಿದರು.