ದಾವಣಗೆರೆ: ಹಣದ ಆಮಿಷ ತೋರಿಸಿ ನಾಮಪತ್ರ ವಾಪಾಸ್ ಪಡೆಯುವಂತೆ ಒತ್ತಡ ಹೇರಿದ ಹಿನ್ನೆಲೆ ದಾವಣಗೆರೆಯ 17ನೇ ವಾರ್ಡಿನ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಮೊಬೈಲ್ ಸ್ವಿಚ್ ಆಫ್ ಮಾಡಿ ಪರ ಊರಿಗೆ ತೆರಳಿ, ನಾಮಪತ್ರ ವಾಪಸ್ ಪಡೆಯುವ ಸಮಯ ಮುಗಿದ ಬಳಿಕ ಹಿಂದಿರುಗಿದ್ದಾರೆ.
ಹೌದು.. ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ರಂಗೇರುತ್ತಿದ್ದು, ಅದರಲ್ಲೂ 17 ನೇ ವಾರ್ಡಿನಲ್ಲಿ ಕಾಂಗ್ರೆಸ್ನಿಂದ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಹಾಗೂ ಬಿಜೆಪಿಯಿಂದ ಪ್ರಭಾವಿ ಯುವ ಮುಖಂಡ ಅಜಯ್ ಕುಮಾರ್ ಸ್ಪರ್ಧಿಸುತ್ತಿದ್ದು, ಭಾರಿ ಪೈಪೋಟಿ ನಡೆಯುತ್ತಿದೆ. ಜೊತೆಯಲ್ಲಿ ಸಾಮಾಜಿಕ ಹೋರಾಟಗಳಿಂದ ಗುರುತಿಸಿಕೊಂಡಿರುವ ಎಂ ಜಿ ಶ್ರೀಕಾಂತ್ ಸಹ ಕಮ್ಯುನಿಸ್ಟ್ ಪಕ್ಷದಿಂದ ಕಣಕ್ಕೆ ಇಳಿದಿರುವುದು ಎರಡು ಪಕ್ಷಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಈ ಹಿನ್ನಲೆ ನಾಮಪತ್ರ ಹಿಂದಕ್ಕೆ ಪಡೆಯುವಂತೆ ವಿಪರೀತ ಒತ್ತಡದ ಜೊತೆಗೆ ಹಣದ ಆಮಿಷ ಬಂದ ಹಿನ್ನೆಲೆ ಮೊಬೈಲ್ ಸ್ವಿಚ್ ಆಫ್ ಮಾಡಿ ಪರ ಊರಿಗೆ ತೆರಳಿದ್ದ ಶ್ರೀಕಾಂತ್, ನಾಮಪತ್ರ ವಾಪಸ್ ಪಡೆಯುವ ಸಮಯ ಮುಗಿದ ಬಳಿಕ ನಿನ್ನೆ ಸಂಜೆ ದಾವಣಗೆರೆಗೆ ವಾಪಾಸ್ ಆಗಿದ್ದಾರೆ.
ಸಾಮಾಜಿಕ ಹೋರಾಟ ಮಾಡುತ್ತಾ ಬಂದಿರುವ ನನಗೆ ಜನ ಶ್ರೀರಕ್ಷೆ ನೀಡುತ್ತಾರೆ ಎಂಬ ನಂಬಿಕೆ ಇಟ್ಟುಕೊಂಡಿದ್ದೇನೆ. ನಾಮಪತ್ರ ವಾಪಾಸ್ ತೆಗೆದುಕೊಳ್ಳುವಂತೆ ಒತ್ತಡ, ಹಣದ ಆಮಿಷ ತೋರಿಸಲಾಗಿತ್ತು. ಇನ್ನೂ ಕೆಲವೆಡೆ ನಾಮಪತ್ರ ವಾಪಾಸ್ ತೆಗೆದುಕೊಂಡಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಇದ್ಯಾವುದಕ್ಕೂ ಬಗ್ಗದೇ ನಾಮಪತ್ರ ವಾಪಸ್ ಪಡೆದಿಲ್ಲ, ಇಂದಿನಿಂದ ಪ್ರಚಾರ ಶುರು ಮಾಡುತ್ತೇನೆ. ನನ್ನ ಹೋರಾಟ, ಸಾಮಾಜಿಕ ಕೆಲಸ ಗುರುತಿಸಿ ಜನ ಗೆಲ್ಲಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಈಟಿವಿ ಭಾರತ್ಗೆ ಶ್ರೀಕಾಂತ್ ಹೇಳಿಕೆ ನೀಡಿದ್ದಾರೆ.