ದಾವಣಗೆರೆ: ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಭಾಷೆ ಕಲಿಯುವುದು ಕಡಿಮೆ ಎಂದು ಲಕ್ಷಾಂತರ ರೂ. ನೀಡಿ ಖಾಸಗಿ ಶಾಲೆಯಲ್ಲೇ ತಮ್ಮ ಮಕ್ಕಳನ್ನು ಓದಿಸಬೇಕೆಂದು ಪೋಷಕರು ಆಲೋಚನೆ ಮಾಡುತ್ತಾರೆ. ಆದರೆ, ದಾವಣಗೆರೆ ತಾಲೂಕಿನ ಅರಸಾಪುರ ಗ್ರಾಮದ ಸರ್ಕಾರಿ ಶಾಲೆ ಖಾಸಗಿ ಶಾಲೆಗೆ ಸೆಡ್ಡು ಹೊಡೆದಿದ್ದು, ಇಲ್ಲಿನ ಮಕ್ಕಳು ಪಟಪಟನೇ ಇಂಗ್ಲಿಷ್ ಓದುತ್ತಾರೆ.
ಹೌದು, ದಾವಣಗೆರೆ ತಾಲೂಕಿನ ಅರಸಾಪುರ ಗ್ರಾಮದಲ್ಲಿರುವ ಸರ್ಕಾರಿ ಶಾಲೆ ಮಕ್ಕಳನ್ನು ಆಕರ್ಷಿಸುತ್ತಿದೆ. ಶಾಲೆಯ ಶ್ರೇಯೋಭಿವೃದ್ಧಿಗಾಗಿ ಮುಖ್ಯ ಶಿಕ್ಷಕರಾದ ಮಹಾರುದ್ರಪ್ಪ ಮೆಣಸಿನಕಾಯಿ ಸಾಕಷ್ಟು ಶ್ರಮಿಸಿದ್ದಾರೆ. ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸದ ಪೋಷಕರ ಮನವೋಲಿಸಿ, ವಿದ್ಯಾರ್ಥಿಗಳನ್ನ ಶಾಲೆಗೆ ಕರೆತಂದು ಉತ್ತಮವಾದ ಗುಣಮಟ್ಟದ ಶಿಕ್ಷಣ ನೀಡಿದ್ದಾರೆ. ಪರಿಣಾಮ ಇಲ್ಲಿನ ಮಕ್ಕಳು ಆಂಗ್ಲ ಭಾಷೆಯ ಪಾಠಗಳನ್ನು ಪಟಪಟನೆ ಓದುವ ಮೂಲಕ ಖಾಸಗಿ ಶಾಲೆಯ ಮಕ್ಕಳು ಹುಬ್ಬೇರಿಸುವಂತೆ ಮಾಡಿದ್ದಾರೆ.
ಇಲ್ಲಿ ಒಂದರಿಂದ ಐದನೇ ತರಗತಿವರೆಗೆ ಒಟ್ಟು 98 ಮಕ್ಕಳು ಕಲಿಯುತ್ತಿದ್ದಾರೆ. ಶಾಲೆಯ ಅಭಿವೃದ್ಧಿಗೆ ಸರ್ಕಾರ ಮತ್ತು ಜಿಲ್ಲಾಡಳಿತವನ್ನು ನೆಚ್ಚಿಕೊಳ್ಳದ ಅರಸಾಪುರದ ಗ್ರಾಮಸ್ಥರು ತಾವೇ ಸ್ವತಃ ಹಣ ಹಾಕಿ ಸುಣ್ಣ ಬಣ್ಣ ಮಾಡಿ, ಮಂಕಾಗಿದ್ದ ಶಾಲೆಯನ್ನ ಸಿಂಗಾರಗೊಳಿಸಿದ್ದಾರೆ. ಮಕ್ಕಳನ್ನು ಆಕರ್ಷಿಸಲು ಶಾಲೆಯ ಗೋಡೆಗಳ ಮೇಲೆ ಲಿಖಿತ ಸಂದೇಶಗಳು, ಬಸ್, ರೈಲು, ಅಂಬೇಡ್ಕರ್, ಗಾಂಧಿ ಚಿತ್ರಗಳನ್ನು ಬಿಡಿಸಿದ್ದಾರೆ. 1959 ರಲ್ಲಿ ಪ್ರಾರಂಭವಾಗಿದ್ದ ಅರಸಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಇದೀಗ ಎಲ್ಲರೂ ತಿರುಗಿ ನೋಡುವಂತೆ ಮಾಡಲಾಗಿದೆ.
ಇಲ್ಲಿನ ಮಕ್ಕಳಿಗೆ ಕನ್ನಡದ ಜೊತೆಗೆ ಹೆಚ್ಚು ಹೆಚ್ಚು ಇಂಗ್ಲಿಷ್ ಭಾಷೆಯ ಪಾಠಗಳನ್ನ ಹೇಳಿ ಕೊಡಲಾಗುತ್ತಿದೆ. ಒಟ್ಟು ನಾಲ್ಕು ಜನ ಶಿಕ್ಷಕರಿದ್ದು, ಕಳೆದೆರೆಡು ದಿನಗಳ ಹಿಂದೆ ಮುಖ್ಯ ಶಿಕ್ಷಕ ಮಹಾರುದ್ರಪ್ಪ ಮೆಣಸಿನಕಾಯಿ ಅವರು ನಿವೃತ್ತಿ ಹೊಂದಿದ್ದಾರೆ. ನಿವೃತಿ ಹೊಂದುವ ಮುನ್ನ ಇಡೀ ಶಾಲೆಯ ಸೌಂದರ್ಯವನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋದ ಕೀರ್ತಿ ಅವರಿಗೆ ಸಲ್ಲುತ್ತದೆ. ಇದಲ್ಲದೇ, ಇಲ್ಲಿನ ಮಕ್ಕಳಿಗೆ ಆಂಗ್ಲ ಭಾಷೆಯಲ್ಲಿ ಕವನ, ಕಥೆ, ಗಾದೆ ಜೊತೆ ಯೋಗ, ನೃತ್ಯ, ಕಲೆ, ಬಗ್ಗೆ ಹೇಳಿಕೊಡಲಾಗುತ್ತಿದೆ.
ಇದನ್ನೂ ಓದಿ: ಚೀನಾ-ಭಾರತದ ನಿಷೇಧಿತ ಪ್ರದೇಶದಲ್ಲಿ ವಾಸ: ನಾನು ಪಾರ್ವತಿ ದೇವಿ ಅವತಾರ ಎನ್ನುತ್ತಿರುವ ಮಹಿಳೆ..ಕಾರಣ?