ಬೆಂಗಳೂರು: ಕಳೆದ ವರ್ಷ ನಾವು ಕನ್ನಡ ರಾಜ್ಯೋತ್ಸವ ಆಚರಿಸಿರಲಿಲ್ಲ. ಈ ಬಾರಿ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಿಸಲು ಏರ್ಪಾಡಾಗಿತ್ತು. ಆದರೆ, ಸೂತಕದ ಛಾಯೆ ಕವಿದಿದೆ. ನಮ್ಮ ನಾಡಿನ ಅತ್ಯಂತ ಕಿರಿಯ ಪ್ರತಿಭಾವಂತನನ್ನು ಕಳೆದುಕೊಂಡಿದ್ದೇವೆ ಎಂದು ಪುನೀತ್ ರಾಜ್ಕುಮಾರ್ ಅವರನ್ನು ನೆನೆದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಈಗಾಗಲೇ ಆರು ಲಕ್ಷ ಜನ ಅಪ್ಪುವಿನ ದರ್ಶನ ಪಡೆದಿದ್ದಾರೆ. ಹಿರಿಯ ಅಧಿಕಾರಿಗಳ ಜೊತೆ ಬೆಂಗಳೂರು ನಗರ ಹಾಗೂ ಸಮಾಧಿ ಸ್ಥಳಕ್ಕೆ ಹೋಗಿ ತಪಾಸಣೆ ಮಾಡುತ್ತೇವೆ. ಇಡೀ ಗೃಹ ಇಲಾಖೆ ಇದರಲ್ಲಿ ತೊಡಗಿಕೊಂಡಿದೆ. 20,000 ಬೆಂಗಳೂರು ಪೊಲೀಸ್, 1,500 ಇತರ ಜಿಲ್ಲೆಗಳಿಂದ ಪೊಲೀಸರು, ಸೆಂಟ್ರಲ್ ರಿಸರ್ವ್ ಪೊಲೀಸರು, ಕೆಎಎಸ್ಆರ್ಪಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಗೃಹ ಸಚಿವರು ತಿಳಿಸಿದರು.
ಇದನ್ನೂ ಓದಿ: ಅಣ್ಣಾವ್ರ ತಂಗಿಗೆ ಪುನೀತ್ ಅಚ್ಚುಮೆಚ್ಚು: ಪ್ರೀತಿಯ ಸೋದರತ್ತೆಗೆ ತಿಳಿದಿಲ್ಲ ಅಪ್ಪು ಅಗಲಿಕೆ ವಿಚಾರ
ಮುಂದಿನ ಚಟುವಟಿಕೆ ಬಗ್ಗೆ ನಿರ್ಧಾರ ಆಗಿಲ್ಲ, ಸಿಎಂ ತಿಳಿಸುತ್ತಾರೆ. ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗಬಾರದು. ಅಶಾಂತಿ ನಿರ್ಮಾಣದ ಕೆಲಸ ಯಾರೂ ಮಾಡೋದು ಬೇಡ. ಮಡಿದ ನಟನಿಗೆ ಭಾವಪೂರ್ಣವಾದ ಶ್ರದ್ಧಾಂಜಲಿ ಅರ್ಪಿಸೋಣ ಎಂದರು.