ಬೆಂಗಳೂರು : ಅಪರೂಪದ ಅನುವಂಶೀಯ "ಲೆಸೋಸೋಮಲ್' ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆ ನೀಡಲು ನಗರದ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಗೆ ಇದೇ ಮೇ 10ರೊಳಗೆ ಕೇಂದ್ರ ಸರ್ಕಾರ ಒಂದೂವರೆ ಕೋಟಿ ರೂ. ಹಾಗೂ ರಾಜ್ಯ ಸರ್ಕಾರ ಒಂದು ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಈ ಕುರಿತು ಲೆಸೋಸೋಮಲ್ ಸ್ಟೋರೇಜ್ ಡಿಸಾರ್ಡರ್ ಸೊಸೈಟಿ ಇಂಡಿಯಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಪ್ರತಿವಾದ ಆಲಿಸಿದ ಪೀಠ, ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ ಲೈಸೋಸೋಮಲ್ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗೆ 6.30 ಕೋಟಿ ರೂ. ಅಗತ್ಯವಿದೆ.
ಸದ್ಯ ಸಂಸ್ಥೆ ಬಳಿ 2.5 ಕೋಟಿ ರೂ. ಇದ್ದು, ಈ ಹಣ ಮೇ ತಿಂಗಳವರೆಗೆ ಸಾಕಾಗಲಿದೆ. ಅದರಂತೆ 3.80 ಕೋಟಿ ರೂ. ಹಣ ಕೊರತೆಯಿದೆ.
ಅಲ್ಲದೆ, ಪ್ರತಿ ಮಗುವಿನ ಚಿಕಿತ್ಸೆಗೆ ತಲಾ 40 ಲಕ್ಷ ರೂ. ಖರ್ಚಾಗುತ್ತಿದ್ದು, ಇಷ್ಟು ದೊಡ್ಡ ಮೊತ್ತವನ್ನು ಮಕ್ಕಳ ಪೋಷಕರು ಭರಿಸಲು ಕಷ್ಟಸಾಧ್ಯ.
ಮಕ್ಕಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಕಲ್ಪಿಸದೆ ಹೋದರೆ, ಮಕ್ಕಳಿಗೆ ಸಂವಿಧಾನದ ಪರಿಚ್ಛೇದ 21ರಲ್ಲಿ ಕಲ್ಪಿಸಿರುವ ಜೀವಿಸುವ ಹಕ್ಕು ಉಲ್ಲಂಘಿಸಿದಂತಾಗುತ್ತದೆ.
ಮಕ್ಕಳಿಗೆ ಅಗತ್ಯ ಚಿಕಿತ್ಸೆ ಕಲ್ಪಿಸುವುದು ಸರ್ಕಾರಗಳ ಕರ್ತವ್ಯವಾಗಿದ್ದು, ಕೇಂದ್ರ ಸರ್ಕಾರ ಮೂರು ಕೋಟಿ ಮತ್ತು ರಾಜ್ಯ ಸರ್ಕಾರ ಎರಡು ಕೋಟಿ ರೂ. ಬಿಡುಗಡೆ ಮಾಡಬೇಕು.
ಈ ಮೊತ್ತದಲ್ಲಿ ಶೇ.50ರಷ್ಟು ಹಣವನ್ನು ಮೇ 10 ಒಳಗೆ ಬಿಡುಗಡೆ ಮಾಡಬೇಕು ಎಂದು ನಿರ್ದೇಶಿಸಿ, ವಿಚಾರಣೆ ಮುಂದೂಡಿತು.