ಬೆಂಗಳೂರು: ಪರಿಸರ ಸಂರಕ್ಷಣೆಯಲ್ಲಿ ತನ್ನ ಕೊಡುಗೆಯನ್ನು ನೀಡುವತ್ತ ಭಾರತೀಯ ರೈಲ್ವೆಯು ಹೊಸ ಪರಿಸರಸ್ನೇಹಿ ಉಪಕ್ರಮ ಹೆಡ್ ಆನ್ ಜನರೇಶನ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು ತನ್ನ ಇಂಧನದ ವೆಚ್ಚವನ್ನು ಗಣನೀಯವಾಗಿ ಕಡಿತಗೊಳಿಸಿದೆ.
ನವೆಂಬರ್ 2019 ರಿಂದ ಈ ಹೆಡ್ ಆನ್ ಜನರೇಶನ್ ತಂತ್ರಜ್ಞಾನವನ್ನು ನೈಋತ್ಯ ರೈಲ್ವೆಯ ಸಂಪರ್ಕ ಜಾಲದಲ್ಲಿರುವ 40 ರೈಲುಗಳಲ್ಲಿ ಅಳವಡಿಸಲಾಗಿದೆ. ಈ ತಂತ್ರಜ್ಞಾನವನ್ನು ಬಳಸಬೇಕಾದಲ್ಲಿ ರೈಲುಗಳಲ್ಲಿ ಎಲ್ಎಚ್ಬಿ ಬೋಗಿಗಳ ಸಂಯೋಜನೆಯ ಅಗತ್ಯವಿದ್ದು, ರೈಲುಗಳನ್ನು ಎಲೆಕ್ಟ್ರಿಕ್ ಟ್ರಾಕ್ಷನ್ನೊಂದಿಗೆ ಸಂಚರಿಸಬೇಕಾಗುತ್ತೆ.
ರೈಲುಗಳಲ್ಲಿ ವಿದ್ಯುದ್ದೀಪಗಳು ಹಾಗೂ ಹವಾನಿಯಂತ್ರಣಕ್ಕಾಗಿ ಅಗತ್ಯವಿರುವ ವಿದ್ಯುತ್ ಪೂರೈಕೆಗಾಗಿ ಈ ತಂತ್ರಜ್ಞಾನವನ್ನು ಅಳವಡಿಸಲಾಗುತ್ತೆ. ಈ ಮೊದಲು ಈ ರೀತಿಯ ವಿದ್ಯುತ್ ಪೂರೈಕೆಗಾಗಿ ಡೀಸೆಲ್ ಜನರೇಟರ್ ಒಳಗೊಂಡಿರುವ ಎಂಡ್ ಆನ್ ಜನರೇಟರ್ಸ್ ಎಂದು ಕರೆಯಲ್ಪಡುವ ಎರಡು ಪವರ್ ಕಾರುಗಳನ್ನು ರೈಲುಗಳಿಗೆ ಅಳವಡಿಸಲಾಗುತ್ತಿತ್ತು.
ಇದೀಗ ಈ ಹೆಚ್ಒಜಿ (ಹಾಗ್) ವ್ಯವಸ್ಥೆಯಲ್ಲಿ ಎಲ್ಎಚ್ಬಿ ಬೋಗಿಗಳಲ್ಲಿನ ವಿದ್ಯುತ್ ಉಪಕರಣಗಳಿಗೆ ಹಾಗ್ ಹೊಂದಾಣಿಕೆಯುಳ್ಳ ಎಲೆಕ್ಟ್ರಿಕ್ ಲೋಕೋಗಳು ಓವರ್ ಹೆಡ್ ವಿದ್ಯುತ್ ಪೂರೈಕೆಯ ತಂತಿಗಳಿಂದ ವಿದ್ಯುಚ್ಛಕ್ತಿಯನ್ನು ಗ್ರಹಿಸಿಕೊಂಡು ವಿದ್ಯುತ್ ಸರಬರಾಜನ್ನು ಮಾಡುತ್ತವೆ. ಪರಿಣಾಮವಾಗಿ ಎಚ್ಎಸ್ಡಿ (ಹೈ ಸ್ಪೀಡ್ ಡೀಸೆಲ್) ಇಂಧನದ ಬಳಕೆಯಲ್ಲಿ ಭಾರಿ ಪ್ರಮಾಣದ ಕಡಿತ ಉಂಟಾಗುತ್ತದೆ.
ಇನ್ನೂ ಹೆಚ್ಚು ರೈಲುಗಳಲ್ಲಿ ಈ ತಂತ್ರಜ್ಞಾನ ಅಳವಡಿಕೆ
ಈ ಉಳಿತಾಯದ ಜೊತೆಗೆ ಡೀಸೆಲ್ ಜನರೇಟರ್ಗಳ ಚಾಲನೆಯಿಂದ ಉತ್ಪತ್ತಿಯಾಗುವ ಶಬ್ದವು ಸಂಪೂರ್ಣವಾಗಿ ನಿವಾರಿಸಲ್ಪಡುತ್ತೆ. ನೈಋತ್ಯ ರೈಲ್ವೆಯಲ್ಲಿ ವಿದ್ಯುದ್ದೀಕರಣ ಕಾರ್ಯ ತ್ವರಿತಗತಿಯಲ್ಲಿ ಸಾಗಿದ್ದು, ಶೀಘ್ರದಲ್ಲೇ ಇನ್ನೂ ಹೆಚ್ಚು ರೈಲುಗಳಲ್ಲಿ ಹಾಗ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುವುದು. ಇದರಿಂದ ಪವರ್ ಕಾರುಗಳ ಸ್ಥಳದಲ್ಲಿ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲು ಅವಕಾಶವಾಗುವುದರಿಂದ ಪ್ರತಿನಿತ್ಯ ಪ್ರಯಾಣಿಕರಿಗೆ ಹೆಚ್ಚಿನ ಬರ್ತ್ ಗಳು ಲಭ್ಯವಾಗಲಿದೆ ಎಂದು ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ತಿಳಿಸಿದ್ದಾರೆ.
ಪ್ರಸ್ತುತ 40 ರೈಲುಗಳು ಹಾಗ್ ವ್ಯವಸ್ಥೆಯೊಂದಿಗೆ ಸಂಚರಿಸುತ್ತಿವೆ. ಹಾಗ್ ವ್ಯವಸ್ಥೆಯೊಂದಿಗಿನ ರೈಲು ಸಂಚಾರದಿಂದ ಕೇವಲ ಡಿಸೆಂಬರ್ 2021ರಲ್ಲೇ ಪವರ್ ಕಾರುಗಳಲ್ಲಿ ಹೈ ಸ್ಪೀಡ್ ಡೀಸೆಲ್ ಇಂಧನದ ಬಳಕೆಯ ಕಡಿತದಿಂದ ಸುಮಾರು ರೂ. 6.93 ಕೋಟಿ ಯಷ್ಟು ಉಳಿತಾಯವಾಗಿದ್ದು 2021ರಲ್ಲಿ ರೂ.70.12 ಕೋಟಿ ಉಳಿತಾಯವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಹಾವೇರಿ: ಸಂಕ್ರಾಂತಿ ದಿನವೇ ಭೀಕರ ಅಪಘಾತ.. ಇಬ್ಬರು ಮಕ್ಕಳು ಸೇರಿ ನಾಲ್ವರು ದುರ್ಮರಣ