ಬೆಂಗಳೂರು: ರಾಜ್ಯ ಸರ್ಕಾರ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಮುಂದಾಗಿದ್ದು, ಇದು ಗ್ರಾಮೀಣ ಮಟ್ಟದ ಮಕ್ಕಳಿಗೆ ಕಷ್ಟ ಸಾಧ್ಯವಾಗಲಿದೆ ಎಂದು ರಾಜ್ಯಸಭೆ ಕಾಂಗ್ರೆಸ್ ಸದಸ್ಯ ಡಾ. ಎಲ್. ಹನುಮಂತಯ್ಯ ಅಭಿಪ್ರಾಯಪಟ್ಟಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ವಿಧಾನಪರಿಷತ್ ಸದಸ್ಯ ಪಿ.ಆರ್. ರಮೇಶ್ ಜತೆ ಜಂಟಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, 8.75 ಲಕ್ಷ ಮಕ್ಕಳ ಭವಿಷ್ಯವನ್ನು ನಿರ್ಧರಿಸಲು ಸರ್ಕಾರ ಮುಂದಾಗಿದೆ. ಉನ್ನತ ಶಿಕ್ಷಣಕ್ಕೆ ಕಾಲಿರಿಸುವ ಪಿಯುಸಿ ಮಕ್ಕಳ ಪರೀಕ್ಷೆ ರದ್ದುಪಡಿಸಿರುವ ಸರ್ಕಾರ ಎಸ್ಎಸ್ಎಲ್ಸಿ ಪರೀಕ್ಷೆ ಮಾತ್ರ ನಡೆಸಲು ಸಜ್ಜಾಗಿದೆ. ಮಕ್ಕಳ ಮೇಲೆ ಇಷ್ಟು ಒತ್ತಡ ಹೇರುವುದು ಅಕ್ಷಮ್ಯ ಅಪರಾಧ. ತಜ್ಞರು ಪರೀಕ್ಷೆ ನಡೆಸುವುದು ಸರಿಯಲ್ಲ ಎನ್ನುವಾಗ ಅಧಿಕಾರಿಗಳ ಮಾತು ಕೇಳಿ ಸಚಿವ ಸುರೇಶ್ ಕುಮಾರ್ ಮುಂದಾಗಿರುವುದು ಸರಿಯಲ್ಲ. ಗ್ರಾಮೀಣ ಭಾಗದ ಶೇ.80 ರಷ್ಟು ಮಕ್ಕಳಿಗೆ ಆನ್ಲೈನ್ ಶಿಕ್ಷಣದ ಪ್ರಯೋಜನ ಸಿಕ್ಕಿಲ್ಲ. ಪರೀಕ್ಷೆ ಎದುರಿಸುವುದು ಕಷ್ಟ. ಈ ಪರೀಕ್ಷೆ ಮಕ್ಕಳ ಮೇಲೆ ಆಗುತ್ತಿರುವ ಹಲ್ಲೆ ಎಂದರು.
ಶಿಕ್ಷಣ ಒಂದು ದಂಧೆಯಾಗಿದೆ. ಇದನ್ನು ಸರ್ಕಾರ ತಡೆಯಬೇಕು. ಶಿಕ್ಷಣ ಸಚಿವ ಸುರೇಶ್ ಕುಮಾರ್, ಕೂಡಲೇ ಶಿಕ್ಷಣ ತಜ್ಞರು, ಸರ್ವ ಪಕ್ಷ ಸದಸ್ಯರ ಸಭೆ ಕರೆಯಬೇಕು. ಶೈಕ್ಷಣಿಕ ವರ್ಷವನ್ನು ಎರಡು ತಿಂಗಳು ಮುಂದೂಡಬೇಕು. ಮಕ್ಕಳಿಗೆ ವ್ಯಾಕ್ಸಿನೇಷನ್ ಮಾಡಿಸಿ. ಪ್ರತಿ ಶಾಸಕರು ತಮ್ಮ ವ್ಯಾಪ್ತಿಯಲ್ಲಿರುವ ಮಕ್ಕಳಿಗೆ ಶಾಸಕ ನಿಧಿಯಿಂದ ಮೊಬೈಲ್ ಕೊಡಿಸಿ. ನಾನು ಸಹ ಸರ್ಕಾರ ಸೂಚಿಸುವ ಭಾಗದ ಮಕ್ಕಳಿಗೆ ಮೊಬೈಲ್ ಕೊಡಲು ಸಿದ್ಧ. ಪ್ರಧಾನಿ ನರೇಂದ್ರ ಮೋದಿ ಮಕ್ಕಳೊಂದಿಗೆ ಮಾತನಾಡುತ್ತೇನೆ ಎಂದು ಪ್ರಚಾರ ಗಿಟ್ಟಿಸುತ್ತಿದ್ದಾರೆ. ಗ್ರಾಮೀಣ ಮಕ್ಕಳ ಜತೆ ಸಮಾಲೋಚಿಸಲಿ. 8.75 ಲಕ್ಷ ಎಸ್ಎಸ್ಎಲ್ಸಿ, 6 ಲಕ್ಷ ಪಿಯುಸಿ ಮಕ್ಕಳ ಭವಿಷ್ಯವನ್ಮು ಸರ್ಕಾರ ಪಣಕ್ಕಿಡಲು ಮುಂದಾಗಿದೆ. ಇದು ಸರಿಯಲ್ಲ ಎಂದರು.
ಇದನ್ನು ಓದಿ: ವಿಪಕ್ಷ ನಾಯಕರು ಸ್ವತಃ ಲಸಿಕೆ ತರಿಸಿ ಹಂಚಲಿ; ಸಚಿವ ಸುಧಾಕರ್
ಕನ್ನಡ ಭಾಷೆಗೆ ಅವಮಾನ ಮಾಡಿರುವ ಕುರಿತು ಮಾತನಾಡಿದ ಅವರು, ಕನ್ನಡ ಭಾಷೆ ಸದೃಢ ಭಾಷೆಯಾಗಿದೆ. ಗೂಗಲ್ ಹಾಗೂ ಅಮೆಜಾನ್ ಸಂಸ್ಥೆ ಅವಹೇಳನ ಮಾಡಿವೆ. ಮುಂದೆ ಯಾರೂ ಕನ್ನಡದ ಬಗ್ಗೆ ಅವಹೇಳನ ಮಾಡದ ರೀತಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಮಾತು ಹಿಂಪಡೆದದ್ದಕ್ಕೆ ವಿಚಾರ ಕೈಬಿಡದೇ, ಕೋರ್ಟಿಗೆ ಕರೆಸಿ ತಪ್ಪೊಪ್ಪಿಗೆ ಪತ್ರ ಬರೆಸಿಕೊಳ್ಳಬೇಕು. ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ್ ಲಿಂಬಾವಳಿ ಒಂದು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಆದರೆ ಇಷ್ಟಕ್ಕೆ ಸುಮ್ಮನಾದರೆ ಸಾಲದು ಎಂದು ಎಲ್ ಹನುಮಂತಯ್ಯ ಹೇಳಿದ್ರು.
ಎಂಎಲ್ಸಿ ಪಿ.ಆರ್. ರಮೇಶ್ ಮಾತನಾಡಿ, ಅನ್ಯದೇಶದಲ್ಲಿ ಕೊರೊನಾ ಅಬ್ಬರ ಕಡಿಮೆ ಆಗಿದೆ. ಆದರೆ ಭಾರತದಲ್ಲಿ ಅಂತಹ ಸ್ಥಿತಿ ಕಾಣಿಸುತ್ತಿಲ್ಲ. ವಾತಾವರಣದ ಪರಿಸ್ಥಿತಿ ಹಾಳಾದರೆ ಸಾವಿನ ಪ್ರಮಾಣ ಹೆಚ್ಚಾಗಲಿದೆ. ಕೊರೊನಾ ಸಾವಿನ ಪ್ರಮಾಣ ಶೇ.2ನ್ನು ಮೀರಬಾರದು ಎಂದಿದೆ. ಆದರೆ ರಾಜ್ಯದಲ್ಲಿ ಸಾವಿನ ಪ್ರಮಾಣ ಇತ್ತೀಚಿಗೆ ಶೇ.7 ಹೆಚ್ಚಾಗಿದೆ. ಮಾಲಿನ್ಯ ಮಟ್ಟ ನಿಯಂತ್ರಣ ಆಗದಿರುವುದೇ ಸಾವು ಹೆಚ್ಚಳಕ್ಕೆ ಕಾರಣ ಎಂದರು.
ಕೊರೊನಾ ಔಷಧಿ ಹಲವು ಹಂತದಲ್ಲಿ ತಪಾಸಣೆಗೆ ಒಳಗಾಗುತ್ತಿದೆ. ಮೊದಲ ಅಲೆಯಲ್ಲಿ ಕಾಣದ ಬ್ಲ್ಯಾಕ್ ಫಂಗಸ್ ಎರಡನೇ ಅಲೆಯಲ್ಲಿ ಕಂಡು ಬಂದಿದೆ. ಪರಿಶುದ್ಧ ಆಮ್ಲಜನಕವನ್ನು ನೀಡಿಲ್ಲ. ಕೈಗಾರಿಕಾ ಬಳಕೆ, ಕಲುಷಿತ ಆಮ್ಲಜನಕವನ್ನು ರೋಗಿಗಳಿಗೆ ನೀಡಲಾಗಿದೆ. ಗಾಳಿ ಹಾಗೂ ನೀರಿನಿಂದ ಆಮ್ಲಜನಕ ಸಿದ್ಧಪಡಿಸಲಾಗುತ್ತದೆ. ಆರ್ಒ ಘಟಕದಲ್ಲಿ ಶುದ್ಧಗೊಳಿಸಿದ ನೀರನ್ನು ಬಳಸಬೇಕು. ಆದರೆ ಬೋರ್ವೆಲ್ ನೀರು ಬಳಸಲಾಗಿದೆ. ಶುದ್ಧ ಆಮ್ಲಜನಕ ಸಿದ್ಧಪಡಿಸಲಾಗಿಲ್ಲ. ಇದರ ತನಿಖೆ ಆಗಬೇಕು ಎಂದು ಹನುಮಂತಯ್ಯ ಆಗ್ರಹಿಸಿದರು.