ಬೆಂಗಳೂರು: ಚಿನ್ನ ಮಾರಾಟ ಮಾಡುವುದಾಗಿ ನಂಬಿಸಿ ಮನೆಗೆ ಕರೆಯಿಸಿಕೊಂಡು ಗೋಲ್ಡ್ ಲೋನ್ ಕಂಪನಿ ದಿವಾಕರ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ಪುಟ್ಟೇನಹಳ್ಳಿ ಪೊಲೀಸರು ಮತ್ತಿಬ್ಬರನ್ನು ಬಂಧಿಸಿದ್ದಾರೆ. ಈ ಹಿಂದೆ ಪ್ರಕರಣದ ಆರೋಪಿಗಳಾದ ಮಂಜುನಾಥ್, ಮುನಿರಾಜು ಎಂಬುವವರನ್ನು ಪೊಲೀಸರು ಬಂಧಿಸಿದ್ದರು.
ಕೊಲೆ ಪ್ರಕರಣದ ಪ್ರಮುಖ ಆರೋಪಿ ಮಂಜುನಾಥ್ ಪತ್ನಿ ರಕ್ಷಿತಾ ಮತ್ತು ಅತ್ತೆ ಗೌರಮ್ಮ ಬಂಧಿತರಾಗಿದ್ದಾರೆ. ಸುಂಕದಕಟ್ಟೆಯಲ್ಲಿರುವ ಮನೆಗೆ ಗೋಲ್ಡ್ ಲೋನ್ ಕಂಪನಿ ದಿವಾಕರ್ ಶೆಟ್ಟಿ ಅವರನ್ನು ಕರೆಯಿಸಿಕೊಂಡು ಮಂಜುನಾಥ್ ಕೊಲೆ ಮಾಡುವಾಗ ಪತ್ನಿ ರಕ್ಷಿತಾ ಮನೆಯಲ್ಲಿದ್ದರು. ಕೊಲೆ ನಂತರ ರಕ್ಷಿತಾ ತಾಯಿ ಗೌರಮ್ಮ ಜೊತೆ ಸೇರಿ ಮನೆಯಲ್ಲಿದ್ದ ರಕ್ತದ ಕಲೆಯನ್ನು ಕ್ಲೀನ್ ಮಾಡಿ ಐದು ಲಕ್ಷ ಹಣದೊಂದಿಗೆ ಮನೆ ಖಾಲಿ ಮಾಡಿದ್ದರು.
ಸದ್ಯ ಸಾಕ್ಷ ನಾಶ ಹಾಗೂ ಕೊಲೆಗೆ ಸಹಕಾರ ಹಿನ್ನೆಲೆ ಗೌರಮ್ಮ ಹಾಗೂ ರಕ್ಷಿತಾಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ಮಂಜುನಾಥ್, ಮುನಿರಾಜು,ರಕ್ಷಿತಾ,ಗೌರಮ್ಮ ಸೇರಿ ನಾಲ್ವರನ್ನು ಬಂಧಿಸಲಾಗಿದೆ.
ಪ್ರಕರಣ ಏನು ?: ಜನವರಿ 20 ರಂದು ಗೋಲ್ಡ್ ಲೋನ್ ಪಡೆಯುವುದಾಗಿ ದಿವಾಕರ್ ಶೆಟ್ಟಿಯನ್ನು ಮಂಜುನಾಥ್ ಮನೆಗೆ ಕರೆಸಿ ಕೊಲೆಮಾಡಿದ್ದ. ನಂತರ ಮೃತದೇಹವನ್ನು ಮಾಗಡಿ ಹೊನ್ನಾಪುರ ಕೆರೆಗೆ ಎಸೆದು, 5 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದ.
ಓದಿ: ಹಾಲಿವುಡ್ ಮೂಲಕ ಬೆಳ್ಳಿತೆರೆಗೆ ದೇಶಿ ಸೂಪರ್ ಹೀರೋ ಶಕ್ತಿಮಾನ್!