ಬೆಂಗಳೂರು : ರಾಜ್ಯಕ್ಕೆ ಕೊರೊನಾ ಮೂರನೇ ಅಲೆಯ ಮನ್ಸೂಚನೆ ಶುರುವಾಗಿದೆ. ಬೆಂಗಳೂರು ರೆಡ್ ಝೋನ್ಲ್ಲಿದೆ. ಕೊರೊನಾ ಜೊತೆಗೆ ರೂಪಾಂತರಿ ಒಮಿಕ್ರಾನ್ ವೈರಸ್ ವೇಗವಾಗಿ ಹರಡುತ್ತಿರುವ ಹಿನ್ನೆಲೆ 20 ತಿಂಗಳ ಬಳಿಕ ಆರಂಭವಾದ ಶಾಲಾ-ಕಾಲೇಜುಗಳು ಪುನಃ ಬಂದ್ ಆಗುವ ಆತಂಕವಿದೆ. ವೈಜ್ಞಾನಿಕ ನೆಲೆಗಟ್ಟಿನ ಮೇಲೆ ಶಾಲೆಯ ಬಂದ್ ಬಗ್ಗೆ ಹೆಜ್ಜೆ ಇಡಿ ಎಂದು ಖಾಸಗಿ ಶಾಲೆಗಳ ಸಂಘಟನೆಗಳು ಮನವಿ ಮಾಡಿವೆ.
ಕೋವಿಡ್-19 ಹಿನ್ನೆಲೆಯಲ್ಲಿ ಮಕ್ಕಳು 20 ತಿಂಗಳು ದೀರ್ಘಕಾಲ ಕಲಿಕೆಯಿಂದ ವಂಚಿತರಾಗಿದ್ದಾರೆ. ಅತಿಮುಖ್ಯವಾದ ಕಲಿಕೆಯ ಕಾಲ ಕಳೆದುಕೊಂಡ ಮಕ್ಕಳ ಶಿಕ್ಷಣ ಬೇರೆಲ್ಲಾ ನಷ್ಟಗಳಿಗಿಂತ ದೊಡ್ಡದು. ಆರ್ಥಿಕ ನಷ್ಟ ಮುಂಬರುವ ದಿನಗಳಲ್ಲಿ ಸರಿದೂಗಿಸಬಹುದು. ಆದರೆ, ಗತಿಸಿದ ಕಾಲವನ್ನು ಮರಳಿ ಪಡೆಯಲಾಗದು ಅಂತಾ ರೂಪ್ಸಾ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.
ಕಳೆದ ಲಾಕ್ಡೌನ್ನಿಂದ ನಾವು ಪಾಠ ಕಲಿಯಬೇಕಿದೆ. ಶಾಲೆಗಳನ್ನು ಆತುರದಲ್ಲಿ ಮುಚ್ಚಿದರೂ ಮಕ್ಕಳು ತಮ್ಮ ಪಾಲಕರೊಂದಿಗೆ ಸಭೆ-0 ಸಮಾರಂಭಗಳಲ್ಲಿ ಭಾಗವಹಿಸುತ್ತಾರೆ. ಪಾಲಕರು ತಮ್ಮ ಮಕ್ಕಳನ್ನು ಅವೈಜ್ಞಾನಿಕ, ಅನಧಿಕೃತ ಕೋಚಿಂಗ್ ಕ್ಲಾಸುಗಳಿಗೆ ತಳ್ಳುತ್ತಾರೆ. ಇದರಿಂದ ಏನೂ ಸಾಧಿಸಿದಂತಾಗದು ಎಂದು ತಿಳಿಸಿದ್ದಾರೆ.
ಒಂದು ವೇಳೆ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು ಎಂದಾದರೆ ಉಳಿದೆಲ್ಲಾ ಕ್ಷೇತ್ರಗಳ ಮೇಲೆ, ಉದಾಹರಣೆಗೆ ರಾಜಕೀಯ ಸಮಾರಂಭ, ಮದುವೆ, ಜಾತ್ರೆ, ಉತ್ಸವಗಳಲ್ಲಿ ಜನರು ಪಾಲ್ಗೊಳ್ಳದಂತೆ ತಡೆಯಬೇಕು. ಮೈಕ್ರೋ ಕಂಟೈನ್ಮೆಂಟ್ಗಳನ್ನು ಗುರುತಿಸಿ, ಆ ಶಾಲೆಗಳಿಗೆ ಮಾತ್ರ ರಜೆ ಘೋಷಿಸಬೇಕು. ಹಿಡಿತಕ್ಕೆ ಬಂದ ಮೇಲೆ ಶಾಲೆಗಳನ್ನು ಪುನಾರಂಭ ಮಾಡಬೇಕು ಎಂದು ಹೇಳಿದ್ದಾರೆ.
ಗ್ರಾಮೀಣ ಭಾಗಗಳಲ್ಲಿ ಒಮಿಕ್ರಾನ್ ಕಾಟವೇ ಇಲ್ಲ. ಇಂತಹ ಪ್ರದೇಶಗಳಲ್ಲಿ ಮಕ್ಕಳ ನಿರಂತರ ಕಲಿಕೆಗೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕು. ಈ ವರ್ಷದ ಶೈಕ್ಷಣಿಕ ಅವಧಿ ಇನ್ನೂ ಮೂರು ತಿಂಗಳು ಬಾಕಿ ಇದೆ. ಹೀಗಾಗಿ, ಪೂರ್ಣಗೊಳಿಸಲು ಕ್ರಮವಹಿಸಬೇಕು ಎಂದು ಲೋಕೇಶ್ ಅವರು ಸಲಹೆ ನೀಡಿದ್ದಾರೆ.
ಶಾಲೆ ವಿಚಾರದಲ್ಲಿ ಸಮಿತಿಯ ಅಸ್ಪಷ್ಟ ನಿಲುವು
ಸೋಂಕು ವ್ಯಾಪಕವಾಗಿ ಹರಡುವ ನಿಟ್ಟಿನಲ್ಲಿ ತಾಂತ್ರಿಕ ಸಲಹಾ ಸಮಿತಿಯು ಶಾಲೆಯ ವಿಚಾರದಲ್ಲಿ ಸ್ಪಷ್ಟ ನಿಲುವು ತಿಳಿಸಿಲ್ಲ. ಶಾಲೆಗಳನ್ನ ಮುಚ್ಚಿ ತರಗತಿಗಳನ್ನು ಆನ್ಲೈನ್ನಲ್ಲಿ ಮಾಡಿದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಷ್ಟವಾಗಲಿದೆ. ಹೀಗಾಗಿ, ಸರ್ಕಾರ ಈ ವಿಚಾರದ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟಿಸಲಿ ಎಂದು ತಜ್ಞರ ಸಮಿತಿ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಬಂದಾಗಿದೆ: ಆರೋಗ್ಯ ಸಚಿವ ಸುಧಾಕರ್