ದೇವನಹಳ್ಳಿ: ವಿಮಾನ ನಿಲ್ದಾಣಗಳಲ್ಲಿ ನಿರ್ಗಮನ ಬಳಕೆದಾರರ ಶುಲ್ಕ ಹಾಗೂ ಲ್ಯಾಂಡಿಂಗ್ ಶುಲ್ಕ ಹೆಚ್ಚಳವಾಗಲಿದೆ. ಈ ಹಿನ್ನೆಲೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಪ್ರಯಾಣ ದರ ಹೆಚ್ಚಳವಾಗುವ ಸಾಧ್ಯತೆಯಿದೆ.
2020ರ ಜನವರಿ 8 ರಂದು ಏವಿಯೇಷನ್ ಟರ್ಬೈನ್ ಇಂಧನಗಳ ಮೇಲೆ ಇಂಧನ ಥ್ರೋಪುಟ್ ಶುಲ್ಕ ವಿಧಿಸುವುದನ್ನು ನಿಲ್ಲಿಸಬೇಕೆಂದು ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರಕ್ಕೆ (ಎಇಆರ್ಎ) ನಾಗರಿಕ ವಿಮಾನಯಾನ ಇಲಾಖೆ ಆದೇಶ ನೀಡಿತ್ತು. ಅಲ್ಲದೇ ಇತರ ನಿಯಂತ್ರಿತ ಶುಲ್ಕಗಳಾದ ಲ್ಯಾಂಡಿಂಗ್ ಮತ್ತು ಬಳಕೆದಾರರ ಶುಲ್ಕಗಳನ್ನು ಪರಿಷ್ಕರಿಸಿ ವಿಮಾನ ನಿಲ್ದಾಣ ಕಾರ್ಯಾಚರಣೆ ನಡೆಸುವ ಸಂಸ್ಥೆಗಳಿಗೆ ಆದಾಯ ನಷ್ಟ ತುಂಬಿಕೊಡುವಂತೆ ನಿರ್ದೇಶಿಸಿದೆ.
ಜೂನ್ 1 ರಿಂದ ಈ ಆದೇಶ ಅನ್ವಯವಾಗಲಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಪ್ರಯಾಣ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ದೇಶಿಯ ಮಾರ್ಗದಲ್ಲಿ ಬಳಕೆದಾರರ ಶುಲ್ಕ 179 ರೂ.ನಿಂದ 184 ರೂ.ಗೆ ಮತ್ತು ಅಂತಾರಾಷ್ಟ್ರೀಯ ಮಾರ್ಗದಲ್ಲಿ 716 ರೂ.ನಿಂದ 839 ರೂ.ಗೆ ಹೆಚ್ಚಳವಾಗಲಿದೆ.