ಬೆಂಗಳೂರು: ಪಂಚಮಸಾಲಿ ಮೀಸಲಾತಿ ವಿಚಾರ ವಿಧಾನಸಭೆ ಕಲಾಪದಲ್ಲಿಂದು ಮತ್ತೆ ಪ್ರತಿಧ್ವನಿಸಿತು. ಶಾಸಕ ಬಸನಗೌಡ ಯತ್ನಾಳ್ ಬೆಳಗ್ಗೆ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ್ದರು. ಸಂಜೆ ಸದನದಲ್ಲಿ ಮತ್ತೆ ವಿಷಯ ಎತ್ತಿದ ಅವರು, ಮೀಸಲಾತಿ ಯಾವಾಗ ಕೊಡುತ್ತೀರಿ ಎನ್ನುವ ಬಗ್ಗೆ ಮುಖ್ಯಮಂತ್ರಿಗಳು ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಇದರ ಬಗ್ಗೆ ಚರ್ಚೆ ನಡೆಯುವಾಗ ಬೆಳಗ್ಗೆ ನಾನು ಸದನದಲ್ಲಿ ಇರಲಿಲ್ಲ. ಹಾಗಾಗಿ ಈ ಬಗ್ಗೆ ತಿಳಿದುಕೊಂಡು ನಾಳೆ ಉತ್ತರ ಕೊಡುವುದಾಗಿ ಸಿಎಂ ಹೇಳಿದರು. ನಿಮಗೆ ಎಲ್ಲ ಮಾಹಿತಿ ಗೊತ್ತಿದೆ. ಆಗ ನೀವು ಗೃಹ ಸಚಿವರಾಗಿದ್ದವರು. ಈಗಲೇ ಉತ್ತರ ಕೊಡಿ ಎಂದು ಯತ್ನಾಳ್ ಆಗ್ರಹಿಸಿದರು.
ಈ ವೇಳೆ ಬಸನಗೌಡ ಯತ್ನಾಳ್ ಕಡೆ ತಿರುಗಿ ಕುಳಿತುಕೊಳ್ಳಿ ಎಂದು ಮುಖ್ಯಮಂತ್ರಿಗಳು ಕೈ ಮುಗಿದರು. ಆಗ ಎದ್ದು ನಿಂತು ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಗಳೇ ಅವರಿಗೆ ಯಾಕೆ ಕೈ ಮುಗಿಯುತ್ತೀರಿ? ಎಂದರು. ಸಿಎಂ ಕೈ ಮುಗಿಯುತ್ತಿದ್ದಂತೆ ಯತ್ನಾಳ್ ಕುಳಿತುಕೊಂಡರು.
ವಿವಿಧ ಸಮುದಾಯಗಳಿಗೆ ಮೀಸಲಾತಿ ನೀಡುವ ಬಗ್ಗೆ ಸಿಎಂ ಉತ್ತರ ಕೇಳಿ ಬೆಳಗ್ಗೆ ಸದನದ ಬಾಗಿಳಿದು ಧರಣಿ ಮಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್ ಸೇರಿದಂತೆ ಹಲವು ಸದಸ್ಯರು ಕಲಾಪದಲ್ಲಿ ಮಾತನಾಡಿದರು.
ಕಾಡುಗೊಲ್ಲ ಮೀಸಲಾತಿ ಚರ್ಚೆಗೆ ಒತ್ತಾಯ:
ಕಾಡುಗೊಲ್ಲ ಮೀಸಲಾತಿ ಚರ್ಚೆಗೆ ಅವಕಾಶ ನೀಡಬೇಕೆಂದು ಇದೇ ವೇಳೆ ಬಿಜೆಪಿ ಸದಸ್ಯೆ ಪೂರ್ಣಿಮಾ ಶ್ರೀನಿವಾಸ್ ಒತ್ತಾಯಿಸಿದರು. ಇದಕ್ಕೆ ಜೆಡಿಎಸ್ ಸದಸ್ಯ ಶಿವಲಿಂಗೇಗೌಡ ಬೆಂಬಲ ವ್ಯಕ್ತಪಡಿಸಿದರು. ಈ ಮಧ್ಯೆ ಸದನ ಇನ್ನೂ ಒಂದು ವಾರ ವಿಸ್ತರಣೆಗೆ ಸಿದ್ದರಾಮಯ್ಯ ಒತ್ತಾಯಿಸಿ, ನಾನೂ ಸಹ ಮೀಸಲು ವಿಷಯದಲ್ಲಿ ಮಾತನಾಡುತ್ತೇನೆ. ಈಗ ಕುಳಿತುಕೊಳ್ಳಿ ಎಂದು ಮನವಿ ಮಾಡಿದರು.