ಬೆಂಗಳೂರು: ಡ್ರಗ್ಸ್ ವಿರುದ್ಧ ಸಮರ ಸಾರಿರುವ ಸಿಸಿಬಿ ಪೊಲೀಸರು ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಬಂಧಿಸಿದ್ದಾರೆ.
ಉಗೋಚಿಕಾವೊ ವಿಕ್ಟರ್ ಎಂಬಾತನನ್ನು ಬಂಧಿಸಿ 40 ಲಕ್ಷ ರೂ. ಮೌಲ್ಯದ 500 ಗ್ರಾಂ ತೂಕದ ಎಂಡಿಎಂಎ ಮಾತ್ರೆಗಳು, 2 ಮೊಬೈಲ್ ಹಾಗೂ ಒಂದು ತೂಕದ ಯಂತ್ರವನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಸ್ಟೂಡೆಂಟ್ ವೀಸಾದಡಿ ಭಾರತಕ್ಕೆ ಬಂದಿದ್ದ ಈತ ವೀಸಾ ಅವಧಿ ಮುಗಿದಿದ್ದರೂ ಕಾನೂನುಬಾಹಿರವಾಗಿ ಉಳಿದುಕೊಂಡಿದ್ದಾನೆ. ಹೆಣ್ಣೂರಿನ ವಡ್ಡರಪಾಳ್ಯದ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದ ವಿಕ್ಟರ್, ಮುಂಬೈನ ಮೈಕಲ್ ಎಂಬಾತನಿಂದ ಡ್ರಗ್ಸ್ ಖರೀದಿಸಿ ನಗರದಲ್ಲಿ ಅಕ್ರಮವಾಗಿ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದ ಎನ್ನಲಾಗಿದೆ.
ಡ್ರಗ್ಸ್ ವ್ಯವಹಾರವನ್ನೇ ಕಾಯಕ ಮಾಡಿಕೊಂಡಿದ್ದ ಈತನ ವಿರುದ್ಧ 2018 ರಲ್ಲಿ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಎನ್ ಇಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.