ಬೆಂಗಳೂರು : ವಿಮಾನ ಮುಖಾಂತರ ನಗರಕ್ಕೆ ಬಂದು ಬೀಗ ಹಾಕಿರುವ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಮೂವರು ಅಂತಾರಾಜ್ಯ ಖದೀಮರನ್ನು ಬಸವನಗುಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಶ್ಚಿಮ ಬಂಗಾಳದ ಬಿಲಾಲ್ ಮಂಡಲ್, ಮಹಾರಾಷ್ಟ್ರದ ಸಲೀಂ ರಫೀಕ್ ಹಾಗೂ ಬಿಹಾರ ಮೂಲದ ಮೊಹಮ್ಮದ್ ಜಾಲೀಕ್ ಎಂಬುವರನ್ನು ಬಂಧಿಸಿ 1.80 ಕೋಟಿ ಮೌಲ್ಯದ 3.3 ಕೆಜಿ ಚಿನ್ನ ಮತ್ತು 18 ಕೆಜಿ ಬೆಳ್ಳಿ ಸಾಮಾನು ವಶಪಡಿಸಿಕೊಳ್ಳಲಾಗಿದೆ.
ಶೋಕಿ ಜೀವನಕ್ಕಾಗಿ ಹಾಗೂ ತ್ವರಿತಗತಿಯಲ್ಲಿ ಶ್ರೀಮಂತರಾಗಲು ಕಳ್ಳತನ ವೃತ್ತಿ ಆಯ್ಕೆ ಮಾಡಿಕೊಂಡಿದ್ದ ಖದೀಮರು, ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ನಗರದ ಸುಧಾಮನಗರದಲ್ಲಿ ಬಾಡಿಗೆ ಮನೆ ಮಾಡಿದ್ದರು.
ಕೃತ್ಯಕ್ಕಾಗಿ ಹೋಂಡಾ ಬೈಕ್ ಖರೀದಿಸಿ ಬೆಳಗ್ಗೆ ಹಾಗೂ ರಾತ್ರಿ ವೇಳೆ ಸುತ್ತಾಡಿ ಬೀಗ ಹಾಕಿರುವ ಮನೆಗಳನ್ನು ಶೋಧ ನಡೆಸಿ ಕಳ್ಳತನ ಮಾಡ್ತಿದ್ದರು. ಕಳೆದ ಜೂನ್ನಲ್ಲಿ ವೈದ್ಯರೊಬ್ಬರ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ನಗ-ನಾಣ್ಯ ದೋಚಿ ಆರೋಪಿಗಳು ನಾಪತ್ತೆಯಾಗಿದ್ದರು.
ದಕ್ಷಿಣ ವಿಭಾಗದಲ್ಲಿ ಹೆಚ್ಚಾದ ಮನೆಗಳ್ಳತನ ಪ್ರಕರಣ ಹಿನ್ನೆಲೆಯಲ್ಲಿ ಡಿಸಿಪಿ ಹರೀಶ್ ಪಾಂಡೆ ಅವರು ಖದೀಮರ ಪತ್ತೆಗಾಗಿ ಬಸವನಗುಡಿ ಇನ್ ಸ್ಪೆಕ್ಟರ್ ರಮೇಶ್ ನೇತೃತ್ವದಲ್ಲಿ ತಂಡ ರಚಿಸಿದ್ದರು. ವೈಜ್ಞಾನಿಕ ಹಾಗೂ ತಾಂತ್ರಿಕ ತನಿಖೆ ನಡೆಸಿ ಮೂವರು ಆರೋಪಿಗಳನ್ನು ಹಿಡಿಯುವಲ್ಲಿ ಪೊಲೀಸರ ವಿಶೇಷ ತಂಡ ಸಫಲವಾಗಿದೆ.
ಫಿಂಗರ್ ಪ್ರಿಂಟ್ನೀಡಿದ ಸುಳಿವು
ಕಳೆದ ಮೂರು ವರ್ಷದ ಹಿಂದೆ ಸಲೀಂ ಹಾಗೂ ಮಂಡಲ್ ಜೊತೆಗೂಡಿ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿ ಬಂದ ಹಣವನ್ನು ಹಂಚಿಕೊಳ್ಳುತ್ತಿದ್ದರು. ಕೆಲ ದಿನಗಳ ಬಳಿಕ ಇಬ್ಬರಲ್ಲಿ ಒಡಕು ಮೂಡಿ ಸಲೀಂ, ಮಂಡಲ್ ನಿಂದ ದೂರವಾಗಿದ್ದ.
ಸಹಚರನಾಗಿದ್ದ ಮೊಹಮ್ಮದ್ ಜಾಲೀಕ್ ಜೊತೆ ಸೇರಿ 12 ಮನೆಗಳ್ಳತನ ಕೃತ್ಯಗಳಲ್ಲಿ ಭಾಗಿಯಾದರೂ ಪೊಲೀಸರ ಕೈಗೆ ಸಿಗದೆ ಚಾಲಾಕಿತನ ತೋರಿದ್ದರು. ಕಳೆದ ಜೂನ್ ನಲ್ಲಿ ನಡೆದ ಕಳ್ಳತನ ನಡೆದ ಮನೆಯಲ್ಲಿ ಫಿಂಗರ್ ಪ್ರಿಂಟ್ ಸಂಗ್ರಹಿಸಿ ಬೆರಳಚ್ಚು ವಿಭಾಗಕ್ಕೆ ಕಳುಹಿಸಿ ತಪಾಸಣೆ ನಡೆಸಿದಾಗ ನಗರದ ವಿವಿಧ ಕಡೆಗಳಲ್ಲಿ ಕೃತ್ಯ ಎಸಗಿರುವುದು ಕಂಡು ಬಂದಿತ್ತು.
ಪೊಲೀಸ್ ಖೆಡ್ಡಾಗೆ ಬಿದ್ದ ಸಲೀಂ
ಮತ್ತೊಂದೆಡೆ ತಾಂತ್ರಿಕವಾಗಿ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಆರೋಪಿ ಸಲೀಂ ಮುಂಬೈನಿಂದ ಬೆಂಗಳೂರಿಗೆ ಬಂದು ಬಸವೇಶ್ವರ ನಗರದಲ್ಲಿ ಕಳ್ಳತನಕ್ಕೆ ಹೊಂಚು ರೂಪಿಸುವಾಗ ಪೊಲೀಸರು ತೋಡಿದ ಖೆಡ್ಡಾಕ್ಕೆ ಸಿಕ್ಕಿಬಿದ್ದಿದ್ದಾನೆ. ಈತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಮಂಡಲ್ ಜೊತೆ ಮತ್ತೆ 17 ಪ್ರಕರಣಗಳಲ್ಲಿ ಭಾಗಿಯಾಗಿರುವ ಬಾಯ್ಬಿಟ್ಟಿದ್ದ.
ನಾಪತ್ತೆಯಾಗಿದ್ದ ಆರೋಪಿಗಳ ಬಗ್ಗೆ ಸುಳಿವಿನ ಮೇರೆಗೆ ಮತ್ತಿಬ್ಬರನ್ನು ಬಂಧಿಸಲಾಗಿದೆ. ಇವರ ಬಂಧನದಿಂದ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 28 ಪ್ರಕರಣ ಭೇದಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕದ್ದ ಚಿನ್ನಾಭರಣಗಳನ್ನು ನಗರದಲ್ಲಿ ಅಡವಿಟ್ಟರೆ ಸಿಕ್ಕಿ ಹಾಕಿಕೊಳ್ಳುವ ಆತಂಕದಿಂದ ಆರೋಪಿಗಳು ಮಹಾರಾಷ್ಟ್ರ ಹಾಗೂ ಹೈದರಾಬಾದ್ ನಲ್ಲಿ ವ್ಯವಹಾರ ನಡೆಸುತ್ತಿದ್ದರು. ಪರಿಚಿತರ ನೆರವಿನಿಂದ ಚಿನ್ನಾಭರಣ ಕರಗಿಸಿ ತಮಗೆ ಬೇಕಾದ ರೀತಿ ಮಾರ್ಪಡಿಸಿ ಮುಂಬೈನ ಮುತ್ತೂಟ್ ಫೈನಾನ್ಸ್ ಹಾಗೂ ಸಹಕಾರಿ ಬ್ಯಾಂಕ್ ಗಳಲ್ಲಿ ಪ್ರತ್ಯೇಕ ಖಾತೆ ತೆರೆದು ಚಿನ್ನಾಭರಣ ಅಡಮಾನ ಇಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.