ಬೆಂಗಳೂರು : ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಉಪಸಭಾಪತಿ, ಸಭಾನಾಯಕ ಗೆಲುವಿನ ನಗೆ ಬೀರಿದ್ದಾರೆ. ಮುಖ್ಯ ಸಚೇತಕ ಕವಟಗಿಮಠ ಭವಿಷ್ಯ ಮಾತ್ರ ಜಾರಕಿಹೊಳಿ ಕುಟುಂಬದ ರಾಜಕೀಯ ಪ್ರಹಸನದಿಂದಾಗಿ ಕಮರಿದೆ. ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಮೂಲಕ ಪರಿಷತ್ ಸ್ಥಾನದೊಂದಿಗೆ ಸಚೇತಕ ಸ್ಥಾನವನ್ನೂ ಕವಟಗಿಮಠ ಕಳೆದುಕೊಳ್ಳುತ್ತಿದ್ದಾರೆ.
ರಾಜ್ಯದ 20 ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ನ 25 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಆಡಳಿತಾರೂಢ ಬಿಜೆಪಿಯಿಂದ ವಿಧಾನ ಪರಿಷತ್ನ ಮೂರು ಪ್ರಮುಖ ಸ್ಥಾನಗಳನ್ನು ನಿಭಾಯಿಸುತ್ತಿರುವವರು ಕಣಕ್ಕಿಳಿದು ಇದರಲ್ಲಿ ಮರು ಆಯ್ಕೆಯಾಗುವಲ್ಲಿ ಇಬ್ಬರು ಸಫಲರಾಗಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದಿಂದ ಕಣಕ್ಕಿಳಿದಿದ್ದ ಉಪಸಭಾಪತಿ ಎಂ.ಕೆ ಪ್ರಾಣೇಶ್ 6 ಮತಗಳಿಂದ ರೋಚಕ ಗೆಲುವು ಸಾಧಿಸಿ ಉಪ ಸಭಾಪತಿ ಪೀಠವನ್ನು ಉಳಿಸಿಕೊಂಡಿದ್ದಾರೆ.
ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇತ್ತು. ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಹಾಗಾಗಿ, ಜೆಡಿಎಸ್ ಮತಗಳು ಪರಿಷತ್ನಲ್ಲಿನ ಮೈತ್ರಿಯಿಂದಾಗಿ ಬಿಜೆಪಿ ಕಡೆ ಅಲ್ಪ ಮಟ್ಟಿಗೆ ವಾಲಿ ಪ್ರಾಣೇಶ್ ಗೆದ್ದು ಬೀಗುವಂತಾಗಿದೆ ಎನ್ನಲಾಗುತ್ತಿದೆ.
ಪರಿಷತ್ ಸಭಾನಾಯಕನ ಸ್ಥಾನ ಅಬಾಧಿತ : ಪರಿಷತ್ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಮರು ಆಯ್ಕೆಯಾಗಿದ್ದಾರೆ. ಹಾಗಾಗಿ, ಪರಿಷತ್ ಸಭಾನಾಯಕರಾಗಿ ಕೋಟ ಮುಂದುವರೆಯಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವಿಸದಸ್ಯತ್ವವಿದ್ದು, ಜಿಲ್ಲೆಯ ಸ್ಥಳೀಯ ಸಂಸ್ಥೆಯಿಂದ ಇಬ್ಬರನ್ನು ಪರಿಷತ್ಗೆ ಆಯ್ಕೆ ಮಾಡಲಾಗಿದೆ.
ಇಲ್ಲಿ ಆಡಳಿತ ಪಕ್ಷ ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷ ಕಾಂಗ್ರೆಸ್ನಿಂದ ಮಂಜುನಾಥ ಭಂಡಾರಿ ಸ್ಪರ್ಧಿಸಿದ್ದರು. ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ, ಎಸ್‌ಡಿಪಿಐ ಮಾತ್ರ ಅಭ್ಯರ್ಥಿಯನ್ನು ಹಾಕಿದ್ದು, ಕೇವಲ ಮೂವರು ಮಾತ್ರ ಕಣದಲ್ಲಿ ಉಳಿದಿದ್ದರು.
ಹಾಗಾಗಿ, ನಿರೀಕ್ಷೆಯಂತೆ ಬಿಜೆಪಿ ಮತ್ತು ಕಾಂಗ್ರೆಸ್ನ ಇಬ್ಬರೂ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದರಿಂದಾಗಿ ಮರು ಆಯ್ಕೆಯಾಗಿರುವ ಕೋಟ ಶ್ರೀನಿವಾಸ ಪೂಜಾರಿ ಪರಿಷತ್ ಸಭಾನಾಯಕರಾಗಿ ಅವರೇ ಮುಂದುವರೆಯಲಿದ್ದಾರೆ.
(ಇದನ್ನೂ ಓದಿ: MLC Election: ಪರಿಷತ್ ಸಭಾನಾಯಕನ ಸ್ಥಾನ ಅಬಾಧಿತ: ಕವಟಗಿಮಠ ಕೈತಪ್ಪುತ್ತಾ ಸಚೇತಕ ಸ್ಥಾನ?)
ಸೋಲುಂಡ ಮುಖ್ಯ ಸಚೇತಕ ಕವಟಗಿಮಠ : ಬಿಜೆಪಿಗೆ ತಲೆನೋವಾಗಿದ್ದು ಸರ್ಕಾರಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ವಿಚಾರದಲ್ಲಿ. ದ್ವಿಸದಸ್ಯ ಬಲದ ಬೆಳಗಾವಿ ಸ್ಥಳೀಯ ಸಂಸ್ಥೆಯಿಂದ ಬಿಜೆಪಿ ಒಬ್ಬರೇ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು.
ಮಹಾಂತೇಶ ಕವಟಗಿಮಠ ಕಣದಲ್ಲಿರುವ ಬಿಜೆಪಿ ಅಭ್ಯರ್ಥಿ ಆದರೆ, ಇಲ್ಲಿ ರಮೇಶ್ ಜಾರಕಿಹೊಳಿ ಸಹೋದರ ಲಖನ್ ಜಾರಕಿಹೊಳಿ ಪಕ್ಷೇತರವಾಗಿ ಕಣಕ್ಕಿಳಿದು ಕವಟಗಿಮಠ ಗೆಲುವಿಗೆ ಅಡ್ಡಿಯಾದರು.
ಬೆಳಗಾವಿಯಲ್ಲಿ ಜಾರಕಿಹೊಳಿ ಕುಟುಂಬದ ಪ್ರಭಾವ ಹೆಚ್ಚಾಗಿದೆ. ಅವರ ಕುಟುಂಬ ಬೆಂಬಲಿತ ಮತಗಳು ಲಖನ್ ಜಾರಕಿಹೊಳಿ ಪರ ಚಲಾವಣೆಯಾದಲ್ಲಿ ಮಹಾಂತೇಶ ಕವಟಗಿಮಠಗೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎನ್ನುವುದು ಬಿಜೆಪಿ ನಾಯಕರ ಆತಂಕಕ್ಕೆ ಕಾರಣವಾಗಿತ್ತು.
ಅದು ಫಲಿತಾಂಶದ ದಿನದಂದು ಸತ್ಯವಾಯಿತು. ಆತಂಕದ ನಡುವೆಯೇ ಚುನಾವಣೆ ಎದುರಿಸಿದ್ದ ಸಚೇತಕ ಕವಟಗಿಮಠ, ಲಖನ್ ಜಾರಕಿಹೊಳಿ ಸ್ಪರ್ಧೆಯಿಂದಾಗಿ ಪರಾಜಿತರಾಗಬೇಕಾಯಿತು. ಬೆಳಗಾವಿಯ ಜಿಲ್ಲಾ ರಾಜಕಾರಣದಲ್ಲಿ ಜಾರಕಿಹೊಳಿ ಕುಟುಂಬದ ಪ್ರತಿಷ್ಠೆಗೆ ಕವಟಗಿಮಠರ ರಾಜಕೀಯ ಭವಿಷ್ಯ ಕಮರುವಂತಾಯಿತು.
ಕೋಟ ಶ್ರೀನಿವಾಸ ಪೂಜಾರಿ ಅವರ ಸಭಾನಾಯಕ ಸ್ಥಾನ ಅಬಾಧಿತವಾಗಿದ್ದು, ಪ್ರಾಣೇಶ್ ಅವರು ಉಪ ಸಭಾಪತಿ ಸ್ಥಾನ ಭದ್ರಪಡಿಸಿಕೊಂಡರು. ಆದರೆ, ಸರ್ಕಾರಿ ಮುಖ್ಯ ಸಚೇತಕರಾಗಿದ್ದ ಮಹಾಂತೇಶ್ ಕವಟಗಿಮಠ ಸೋಲುವ ಮೂಲಕ ಪರಿಷತ್ಗೆ ಮರು ಆಯ್ಕೆಯಾಗುವ ಕನಸು ನುಚ್ಚು ನೂರಾಯಿತು.
ಈ ಕುರಿತು ಈಟಿವಿ ಭಾರತ ಡಿಸೆಂಬರ್ 6ರಂದು ಪರಿಷತ್ ಸಭಾನಾಯಕನ ಸ್ಥಾನ ಅಬಾಧಿತ, ಕವಟಗಿಮಠ ಕೈತಪ್ಪುತ್ತಾ ಸಚೇತಕ ಸ್ಥಾನ..? ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.