ಬೆಂಗಳೂರು : ಹಳೆ ವಿದ್ಯಾರ್ಥಿಗಳು, ಖಾಸಗಿ ವ್ಯಕ್ತಿಗಳು, ಕಾರ್ಪೊರೇಟ್ ಕಂಪನಿಗಳು, ಸರ್ಕಾರೇತರ ಸಂಸ್ಥೆಗಳು ಸರಕಾರಿ ಶಾಲೆಗಳ ಅಭಿವೃದ್ಧಿಗೆ ಕೊಡುಗೆ ನೀಡಲು ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳು ಮುಂದಾಗಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ ಸಿ ನಾಗೇಶ್ ಹೇಳಿದರು.
ನಗರದ ಸಾರಕ್ಕಿಯಲ್ಲಿ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಶಾಲೆಯ ಹಳೆ ವಿದ್ಯಾರ್ಥಿ ವಿ ಎಸ್ ರೆಡ್ಡಿಯವರ ನೆರವಿನೊಂದಿಗೆ ನೂತನವಾಗಿ ನಿರ್ಮಿಸಿರುವ ಅಬ್ಬಯ್ಯ ರೆಡ್ಡಿ ಸ್ಮಾರಕ ಪ್ರಾಥಮಿಕ ಶಾಲಾ ಕಟ್ಟಡ ಉದ್ಘಾಟಿಸಿ ಸಚಿವ ನಾಗೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಯನಗರ ಶಾಸಕಿ ಸೌಮ್ಯಾರೆಡ್ಡಿ, ಬಿಬಿಎಂಪಿ ಮಾಜಿ ಮಹಾಪೌರ ಎಸ್ ಕೆ ನಟರಾಜ್ ಸೇರಿ ಇನ್ನಿತರರು ಉಪಸ್ಥಿತರಿದ್ದರು.
![Minister BC Nagesh visit to Government School in Bangalore](https://etvbharatimages.akamaized.net/etvbharat/prod-images/kn-bng-11-education-minister-nagesh-on-goverment-schools-development-private-firms-ngos-people-should-come-forward-ka10032_22102021204653_2210f_1634915813_631.jpg)
ಶಾಲೆಯ ಹಳೆ ವಿದ್ಯಾರ್ಥಿಗಳು, ಕಾರ್ಪೊರೇಟ್ ಕಂಪನಿಗಳು, ಉದ್ಯಮಿಗಳು ಸೇರಿ ಯಾರು ಬೇಕಾದರೂ ಶಾಲೆಗಳನ್ನು ಅಭಿವೃದ್ಧಿಪಡಿಸಲು, ಅಗತ್ಯವಿರುವ ಸಾಮಗ್ರಿಗಳನ್ನು ಒದಗಿಸಲು ಅನುಕೂಲ ಕಲ್ಪಿಸಲೆಂದು ನಮ್ಮ ಶಾಲೆ, ನನ್ನ ಕೊಡುಗೆ ಎಂಬ ವೆಬ್ ಪೋರ್ಟಲ್ ಅನ್ನು ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ. ಆದರೆ, ವೆಬ್ ಪೋರ್ಟಲ್ಗೂ ಮೊದಲೇ ಈ ಶಾಲೆಯ ಹಳೇ ವಿದ್ಯಾರ್ಥಿ ವಿ ಎಸ್ ರೆಡ್ಡಿಯವರು ತಾವು ಕಲಿತ ಶಾಲೆಯನ್ನು ಅಭಿವೃದ್ಧಿಪಡಿಸಿರುವುದು ಶ್ಲಾಘನೀಯ ಎಂದು ಸಚಿವ ನಾಗೇಶ್ ನುಡಿದರು.
ತಾನು ಓದಿದ ಶಾಲೆಯನ್ನು ನೋಡಿ ಅದನ್ನು ಇನ್ನಷ್ಟು ಉತ್ತಮವಾಗಿ ಅಭಿವೃದ್ಧಿಪಡಿಸಬೇಕು ಎಂದು ನಿರ್ಧರಿಸಿದ ವಿ ಎಸ್ ರೆಡ್ಡಿಯವರು, 2 ಕೋಟಿ ರೂ.ಗೂ ಹೆಚ್ಚು ಹಣ ಖರ್ಚು ಮಾಡಿ ಮಾದರಿಯಾಗಿ ಶಾಲೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಪಣ ತೊಟ್ಟಿರುವುದು ತಿಳಿದು ಖುಷಿಯಾಯಿತು ಎಂದು ಸಚಿವ ನಾಗೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.
5 ಸಾವಿರ ಶಿಕ್ಷಕರ ನೇಮಕಕ್ಕೆ ಚಾಲನೆ : ಶಿಕ್ಷಣದ ಗುಣಮಟ್ಟ ಉತ್ತಮವಾಗಿರಬೇಕು ಎಂಬ ಕಾರಣಕ್ಕೆ ಟಿಇಟಿ, ಸಿಇಟಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತಿದೆ. ಸದ್ಯದಲ್ಲೇ 5 ಸಾವಿರ ಶಿಕ್ಷಕರ ನೇಮಕಕ್ಕೆ ಚಾಲನೆ ನೀಡಲಾಗುತ್ತದೆ. ಕೊರತೆ ನೀಗಿಸಲು ಅತಿಥಿ ಶಿಕ್ಷಕರ ನೇಮಕಕ್ಕೆ ಈಗಾಗಲೇ ಅವಕಾಶ ನೀಡಲಾಗಿದೆ ಎಂದರು.
![Minister BC Nagesh visit to Government School in Bangalore](https://etvbharatimages.akamaized.net/etvbharat/prod-images/kn-bng-11-education-minister-nagesh-on-goverment-schools-development-private-firms-ngos-people-should-come-forward-ka10032_22102021204653_2210f_1634915813_460.jpg)
UPSC ಪಾಸಾದವರಲ್ಲಿ ಸರ್ಕಾರಿ ಶಾಲೆಗಳಿಂದ ಬಂದವ್ರೇ ಹೆಚ್ಚು : ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಕೊರತೆ ಇಲ್ಲ. ಸಮರ್ಥ ಶಿಕ್ಷಕರಿದ್ದಾರೆ. 2020ರ ಯುಪಿಎಸ್ಸಿ ಪಾಸಾಗಿರುವವರಲ್ಲಿ ಹಲವು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಓದಿದ್ದಾರೆ. ಅದರಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರೂ ಇದ್ದಾರೆ. ಈ ಮೂಲಕ ಕನ್ನಡ ಶಾಲೆಗಳು ಯಾವುದೇ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಕಮ್ಮಿ ಇಲ್ಲದಂತೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿವೆ ಎಂದರು.
3,800ಕ್ಕೂ ಹೆಚ್ಚು ಶಾಲೆಗಳಲ್ಲಿ 10 ಮಕ್ಕಳಿಗಿಂತ ಕಡಿಮೆ ಹಾಜರಾತಿ : ಸರಕಾರದ ಉದ್ದೇಶ ಸೇವಾ ಮನೋಭಾವದಿಂದ ಶಿಕ್ಷಣ ನೀಡುವುದಾಗಿದೆ. ರಾಜ್ಯದಲ್ಲಿ 10 ಮಕ್ಕಳಿಗಿಂತ ಕಡಿಮೆ ಇರುವ 3,800ಕ್ಕೂ ಹೆಚ್ಚು ಶಾಲೆಗಳಿವೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಕಡಿಮೆ ಮಕ್ಕಳಿದ್ದರೂ ಶಾಲೆಗಳನ್ನು ಮುಂದುವರೆಸಲಾಗುತ್ತಿದೆ ಎಂದು ನುಡಿದರು.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚು : ಪ್ರಸಕ್ತ ಸಾಲಿನಲ್ಲಿ ರಾಜ್ಯದ ಎಲ್ಲ ಕಡೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಶಾಲಾ ಕಟ್ಟಡ ಮತ್ತು ಶಿಕ್ಷಣದ ಸುಧಾರಣೆಯ ಗುರಿಗಳಿವೆ. ರಾಜ್ಯದ ಎಲ್ಲ ತಾಲೂಕುಗಳಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿತ್ತು.
ನಂತರ ಹೋಬಳಿ ಮಟ್ಟದಲ್ಲಿ ಸ್ಥಾಪಿಸುವ ಗುರಿ ಹಾಕಿಕೊಳ್ಳಲಾಯಿತು. ಆದರೆ, ಕೋವಿಡ್ ಕಾರಣ ಹಿನ್ನಡೆಯಾಗಿದೆ. ಆದರೆ, ಆ ಗುರಿಗಳು ಮುಂದಿನ ದಿನಗಳಲ್ಲಿ ಈಡೇರುವ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.
![Minister BC Nagesh visit to Government School in Bangalore](https://etvbharatimages.akamaized.net/etvbharat/prod-images/kn-bng-11-education-minister-nagesh-on-goverment-schools-development-private-firms-ngos-people-should-come-forward-ka10032_22102021204653_2210f_1634915813_410.jpg)
ವಾಜಪೇಯಿ ಅವರ ಪ್ರಯತ್ನ : 2001ರಲ್ಲಿ ಪ್ರಧಾನಿಯಾಗಿದ್ದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಎಲ್ಲ ಮಕ್ಕಳಿಗೂ ಕಡ್ಡಾಯವಾಗಿ ಶಿಕ್ಷಣ ಸಿಗಬೇಕು ಎಂಬ ದೂರದೃಷ್ಟಿ ಫಲವಾಗಿ ಸರ್ವ ಶಿಕ್ಷಣ ಅಭಿಯಾನ ಜಾರಿಗೆ ಬಂದಿತು. ಎಲ್ಲ ಮಕ್ಕಳಿಗೂ ಶಿಕ್ಷಣ ಕೊಡಬೇಕೆಂಬ ಪ್ರಯತ್ನ ಫಲ ನೀಡಿ, ಯೋಜನೆಯನ್ನು ಪ್ರೌಢ ಶಿಕ್ಷಣಕ್ಕೆ ವಿಸ್ತರಿಸಲಾಯಿತು. ವಾಜಪೇಯಿ ಅವರ ಪ್ರಯತ್ನದ ಫಲ ನೀಡಿತು ಎಂದು ಹೇಳಿದರು.
ಅಗತ್ಯ ಸೌಕರ್ಯ : ಅನೇಕ ಸರ್ಕಾರೇತರ ಸಂಸ್ಥೆಗಳು ಸರಕಾರಿ ಶಾಲೆಗಳ ಅಭಿವೃದ್ಧಿಗೆ ಕೊಡುಗೆ ನೀಡುತ್ತಿವೆ. ಸಾರಕ್ಕಿಯ ಕರ್ನಾಟಕ ಪಬ್ಲಿಕ್ ಶಾಲೆಯನ್ನು ದೊಡ್ಡ ದೊಡ್ಡ ಖಾಸಗಿ ಶಾಲೆಗಳಿಗೆ ಕಮ್ಮಿ ಇಲ್ಲದಂತೆ ಅಭಿವೃದ್ಧಿಪಡಿಸಿದ ಈ ಶಾಲೆಯ ಹಳೇ ವಿದ್ಯಾರ್ಥಿ ವಿ.ಎಸ್ ರೆಡ್ಡಿ ಅವರು ಅಭಿನಂದನಾರ್ಹರು ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ ಸೇರಿ ಎಲ್ಲ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.