ಬೆಂಗಳೂರು/ಬಳ್ಳಾರಿ: ಸಚಿವ ಆನಂದ್ ಸಿಂಗ್ ಅವರಿಗೆ ತವರು ಜಿಲ್ಲೆ ವಿಜಯನಗರ ಉಸ್ತುವಾರಿ ಕೈ ತಪ್ಪಿತ್ತು. ಆದರೆ, ಇದೀಗ ಅವರಿಗೆ ಆ. 15ರಂದು ತಮ್ಮ ತವರು ಜಿಲ್ಲೆಯಲ್ಲೇ ಧ್ವಜಾರೋಹಣ ಮಾಡಲು ಅವಕಾಶ ಸಿಕ್ಕಿದೆ. ಈ ಸಂಬಂಧ ಸರ್ಕಾರ ಆದೇಶ ಹೊರಡಿಸಿದೆ.
ಆದೇಶದಲ್ಲಿ ಮೂರು ಜಿಲ್ಲೆಗಳಲ್ಲಿ ಧ್ವಜಾರೋಹಣ ಮಾಡುವ ಸಚಿವರ ಪಟ್ಟಿಯನ್ನು ಪ್ರಕಟಿಸಿದೆ. ಅದರಂತೆ ಸಚಿವ ಆನಂದ್ ಸಿಂಗ್ ಅವರಿಗೆ ತವರು ಜಿಲ್ಲೆ ವಿಜಯನಗರ, ಕೊಪ್ಪಳ ಜಿಲ್ಲೆಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಮಂಡ್ಯದಲ್ಲಿ ಸಚಿವ ಆರ್.ಅಶೋಕ್ ಅವರಿಗೆ ಧ್ವಜಾರೋಹಣ ಮಾಡುವ ಹೊಣೆ ನೀಡಲಾಗಿದೆ.
ಆಯಾ ಜಿಲ್ಲೆಯ ಉಸ್ತವಾರಿ ಸಚಿವರಿಗೆ ಆಯಾ ಜಿಲ್ಲೆಗಳಲ್ಲಿ ಆ.15ರಂದು ಧ್ವಜಾರೋಹಣ ಮಾಡುವ ಹೊಣೆಗಾರಿಕೆ ನೀಡಲಾಗಿದೆ. ಆದರೆ, ಸಚಿವ ಆನಂದ್ ಸಿಂಗ್ ತವರು ಜಿಲ್ಲೆಯಲ್ಲಿ ಧ್ವಜಾರೋಹಣ ಮಾಡಲು ಅವಕಾಶ ನೀಡುವಂತೆ ಸಿಎಂಗೆ ಮನವಿ ಸಲ್ಲಿಸಿದ್ದರು. ಈ ಸಂಬಂಧ ಇದೀಗ ಮೂರು ಜಿಲ್ಲೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ.
ಇತ್ತೀಚೆಗೆ ಸಚಿವ ಆನಂದ್ ಸಿಂಗ್ ಅವರಿಗೆ ವಿಜಯನಗರ ಜಿಲ್ಲಾ ಉಸ್ತವಾರಿ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ನೀಡಿ ಆದೇಶಿಸಲಾಗಿತ್ತು. ಯಾವ ಸಚಿವರಿಗೂ ತವರು ಜಿಲ್ಲೆಯ ಉಸ್ತುವಾರಿ ನೀಡಬಾರದು ಎಂಬ ಹೈ ಕಮಾಂಡ್ ಸೂಚನೆ ಇದ್ದರೂ ಸಿಎಂ ಈ ಆದೇಶ ಹೊರಡಿಸಿದ್ದರು.
ಬಳಿಕ ಇತರ ಉಸ್ತುವಾರಿ ಸಚಿವರು ತಮಗೂ ತವರು ಜಿಲ್ಲೆ ಉಸ್ತುವಾರಿ ನೀಡುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಲು ಪ್ರಾರಂಭಿಸಿದ ಹಿನ್ನೆಲೆ ಸಿಎಂ ಅದೇ ದಿನ ಸಂಜೆ ಸಚಿವ ಆನಂದ್ ಸಿಂಗ್ಗೆ ತವರು ಜಿಲ್ಲೆ ಉಸ್ತುವಾರಿ ನೀಡಿದ್ದ ಆದೇಶವನ್ನು ಹಿಂಪಡೆದಿದ್ದರು.
ನೂತನ ವಿಜಯನಗರ ಜಿಲ್ಲೆಯಲ್ಲಿ 405 ಅಡಿ ಎತ್ತರದ ಧ್ವಜಸ್ತಂಭ ನಿರ್ಮಾಣ ಮಾಡಲಾಗಿದೆ. ಇದು ದೇಶದಲ್ಲೇ ಅತಿ ಎತ್ತರದ ಧ್ವಜಸ್ತಂಭ ಎಂದು ಹೇಳಲಾಗುತ್ತಿದೆ. ಆ.15 ರಂದು ಸಚಿವ ಆನಂದ್ ಸಿಂಗ್ ಧ್ವಜಾರೋಹಣ ನೆರವೇರಿಸುವ ಮೂಲಕ ಐತಿಹಾಸಿಕ ಕ್ಷಣದ ಕೇಂದ್ರ ಬಿಂದುವಾಗಲಿದ್ದಾರೆ.
ಇದನ್ನೂ ಓದಿ: ಹೊಸಪೇಟೆಯಲ್ಲಿ ದೇಶದ ಅತಿ ಎತ್ತರದ ಧ್ವಜಸ್ತಂಭ ಪ್ರತಿಷ್ಠಾಪನೆ