ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಕಸ ವಿಲೇವಾರಿ ಕೆಲಸವನ್ನು ಬಹುತೇಕರು ಅದು ಕೀಳರಿಮೆಯ ಕನಿಷ್ಠ ಕೆಲಸ ಅಂತಾನೇ ನೋಡ್ತಾರೆ. ಆದರೆ, ಇಲ್ಲೋರ್ವ ನಾರಿ ಕಸ ಸಂಗ್ರಹಿಸುವ ಕಾಯಕ ಮಾಡಲು ಮುಂದಾಗಿ ಸ್ವಚ್ಛ ವಾಹಿನಿಯ ಚಾಲಕಿಯಾಗುವ ಕಾರಣಕ್ಕೆ ಚಾಲನಾ ತರಬೇತಿ ಪಡೆದಳು. ಬೆಳಗ್ಗೆ ಸ್ವತಃ ಆಟೋ ಚಾಲನೆ ಮಾಡ್ಕೊಂಡ್ ಕಸ ಸಂಗ್ರಹಿಸುವ ಈ ಮಹಿಳೆ ಯುವತಿಯರಿಗೆ ಮಾದರಿಯಾಗಿದ್ದಾರೆ.
ತಾಲೂಕಿನಲ್ಲಿ ಪಿಯು ವಿದ್ಯಾಭ್ಯಾಸ ಮಾಡಿರುವ ಚಂದನಾ, ಪುಸ್ತಕ ಹಿಡಿಯಬೇಕಾದ ಕೈಗಳಲ್ಲೀಗ ಆಟೋ ಸ್ಟೇರಿಂಗ್ ಹಿಡಿದಿದ್ದಾರೆ. ಕಲರ್ಫುಲ್ ಡ್ರೆಸ್ ಹಾಕೊಂಡು ಕಾಲೇಜಿಗೆ ಹೋಗುತ್ತಿದ್ದ ಈ ಯುವತಿ ಸ್ವಚ್ಛ ವಾಹಿನಿಯ ಚಾಲಕಿಯಾಗಿ ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮ ಪಂಚಾಯತ್‌ನ ಸ್ವಚ್ಛ ವಾಹಿನಿ ಚಾಲಕಿ ಕೆಲಸವನ್ನು ಚಂದನಾ ಮಾಡುತ್ತಿದ್ದಾರೆ. ಇಬ್ಬರು ಸಹಾಯಕಿಯರೊಂದಿಗೆ 18 ಗ್ರಾಮಗಳಲ್ಲಿ ಕಸ ಸಂಗ್ರಹಿಸಿ ಕಸ ವಿಲೇವಾರಿ ಘಟಕಕ್ಕೆ ತರುವ ಜವಾಬ್ದಾರಿ ಈಕೆಯ ಮೇಲಿದೆ. ಬೆಳಗ್ಗೆ 8 ರಿಂದ ಆರಂಭವಾಗುವ ಕಾಯಕ ಸಂಜೆ 5 ಗಂಟೆವರೆಗೆ ಮುಂದುವರಿಯುತ್ತೆ.
ಮೊದ ಮೊದಲಿಗೆ ಆಟೋ ಚಾಲನೆ ಮಾಡಿಕೊಂಡು ಕಸ ಸಂಗ್ರಹಕ್ಕೆ ಹೋದಾಗ ಮುಜುಗರ ಪಟ್ಟಿದ್ರು. ಆದರೆ, ಗಟ್ಟಿ ಧೈರ್ಯ ಮಾಡಿ ಮುನ್ನುಗ್ಗಿದ ಅವರು ಚಾಲಕಿಯಾಗಿ ಉತ್ತಮ ಕೆಲಸ ಮಾಡುವ ಮೂಲಕ ಜನರ ಮೆಚ್ಚುಗೆಯನ್ನು ಸಹ ಗಳಿಸಿದ್ದಾರೆ.
ಪಿಯುಸಿ ವ್ಯಾಸಂಗ ಮುಗಿಸಿರುವ ಚಂದನಾ : ಪಾಲಕರ ಒತ್ತಾಸೆಯಂತೆ ಮದುವೆಯಾಗಿ, ಒಂದು ಮಗುವಿನ ತಾಯಿಯೂ ಆಗಿದ್ದಾರೆ. ಆದರೆ, ಚಂದನಾಳ ಸಾಧಿಸುವ ಛಲ ಮಾತ್ರ ಹಾಗೆಯೇ ಇತ್ತು. ಸ್ತ್ರೀಶಕ್ತಿ ಸಂಘಟನೆಯ ಸದಸ್ಯೆಯಾಗಿರುವ ಚಂದನಾ ಸ್ತ್ರೀ ಸಂಘಟನೆಗಳ ಸಹಕಾರದಿಂದ 20 ದಿನಗಳ ಚಾಲನಾ ತರಬೇತಿಯನ್ನ ಪಡೆದರು.
ಇದರ ಜೊತೆ ತೂಬಗೆರೆ ಗ್ರಾಮ ಪಂಚಾಯತ್ ಮಹಿಳಾ ಸಬಲೀಕರಣಕ್ಕೆ ಮುಂದಾಗಿತ್ತು. ಸ್ತ್ರೀ ಸಂಘಟನೆಗಳು ಮತ್ತು ಪಂಚಾಯತ್‌ನ ಬೆಂಬಲದೊಂದಿಗೆ ಚಂದನಾ ಸ್ವಚ್ಛ ವಾಹಿನಿಯ ಸಾರಥಿಯಾಗಿ ಸೇವೆಗೆ ಸೇರಿದರು. ಉತ್ತಮ ಕೆಲಸದಿಂದ ಪಂಚಾಯತ್ ಸದಸ್ಯರ ಮೆಚ್ಚುಗೆ ಸಹ ಪಡೆದಿದ್ದಾರೆ.