ಬೆಂಗಳೂರು: ಡಿಸೆಂಬರ್ 10ರಂದು ನಡೆದ ವಿಧಾನ ಪರಿಷತ್‍ನ 25 ಸ್ಥಾನಗಳ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದೆ. ಮತ ಎಣಿಕೆಗೆ ಚುನಾವಣಾ ಆಯೋಗ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಬೆಳಗ್ಗೆ 8 ಗಂಟೆಯಿಂದ ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆ ಪ್ರಾರಂಭವಾಗಲಿದೆ.
ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ, ಕೋಲಾರ, ಬೀದರ್, ಕಲಬುರಗಿ, ಬಿಜಾಪುರ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಮಂಡ್ಯ, ಕೊಡಗು, ಮೈಸೂರು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ಮತಪತ್ರಗಳು ಮತ್ತು ಪ್ರಾಶಸ್ತ್ಯದ ಮತಗಳನ್ನು ಎಣಿಸಬೇಕಾಗಿರುವುದರಿಂದ ಸಂಪೂರ್ಣ ಫಲಿತಾಂಶ ಬರುವುದಕ್ಕೆ ತಡವಾಗಬಹುದು ಎಂದು ಹೇಳಲಾಗುತ್ತಿದೆ. ಬೆಂಗಳೂರು ನಗರ ಜಿಲ್ಲೆಯ ಮತ ಎಣಿಕೆ ಮಹಾರಾಣಿ ಕಾಲೇಜಿನಲ್ಲಿ ನಡೆಯಲಿದ್ದು, ಉಳಿದ ಕ್ಷೇತ್ರಗಳ ಮತ ಎಣಿಕೆ ಆಯಾ ಜಿಲ್ಲೆಗಳಲ್ಲೇ ನಡೆಯಲಿವೆ.
ಇದನ್ನೂ ಓದಿರಿ: ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ: ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ
ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 20 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಜೆಡಿಎಸ್ ಕೇವಲ ಆರು ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಐದು ಸ್ಥಾನಗಳಲ್ಲಿ ಅಂತಹ ಪೈಪೋಟಿ ಇಲ್ಲ. ಉಳಿದ ಕಡೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಡುವೆ ತೀವ್ರ ಪೈಪೋಟಿ ಇದೆ. ತೀವ್ರ ಜಿದ್ದಾಜಿದ್ದಿನ ಪೈಪೋಟಿ ನಡುವೆ ಚುನಾವಣೆ ನಡೆದಿದ್ದು, ಮೂರು ರಾಜಕೀಯ ಪಕ್ಷಗಳು ತಮ್ಮದೇ ಆದ ಲೆಕ್ಕಾಚಾರಗಳ ಮೂಲಕ ಜಯದ ನಿರೀಕ್ಷೆಯಲ್ಲಿವೆ.
ನಾಯಕರಲ್ಲಿ : ಮೂರು ಪಕ್ಷಗಳ ನಾಯಕರು ಹಾಗೂ ಅಭ್ಯರ್ಥಿಗಳಲ್ಲಿ ಕಾತರ ಹೆಚ್ಚಾಗಿದೆ. ಇಂದಿನ ಮತ ಎಣಿಕೆ ಕಡೆ ಎಲ್ಲರ ಚಿತ್ತ ಹರಿದಿದೆ. ಡಿಸೆಂಬರ್ 10 ರಂದು ನಡೆದ ಚುನಾವಣೆಯಲ್ಲಿ ಸುಮಾರು 96 ಸಾವಿರ ಮತದಾರರು 91 ಅಭ್ಯರ್ಥಿಗಳ ಭವಿಷ್ಯವನ್ನು ಬರೆದಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಕೆಲವು ಕಡೆ ಪಕ್ಷೇತರರು ಅಡ್ಡಗಾಲಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಪ್ರಮುಖವಾಗಿ ಬೆಳಗಾವಿ, ಹಾಸನ, ಧಾರವಾಡ, ತುಮಕೂರು, ಮಂಡ್ಯ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಮೇಲೆ ನಾಯಕರ ಕಣ್ಣು ನೆಟ್ಟಿದೆ. ಈ ಚುನಾವಣೆಯಲ್ಲಿ ಹಣದ ಪ್ರಭಾವದ ಮುಂದೆ ಯಾರ ಪ್ರಭಾವವೂ ಅಷ್ಟು ಬೀರಿಲ್ಲ ಎನ್ನಲಾಗಿದೆ. ಹಾಗಾಗಿ ಹೆಚ್ಚು ಹಣ ಕೊಟ್ಟಿರುವವರು ನಮ್ಮದೇ ಗೆಲುವು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಬಿಜೆಪಿ 12 ಸ್ಥಾನಗಳಿಗೂ ಹೆಚ್ಚು ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರದಲ್ಲಿದ್ದು, ಕಾಂಗ್ರೆಸ್ ಸಹ ಅದೇ ಲೆಕ್ಕಾಚಾರದಲ್ಲಿ ಇದೆ. ಆರಕ್ಕೆ ಆರೂ ಸ್ಥಾನ ಬರುತ್ತದೆ ಎಂಬ ವಿಶ್ವಾಸದಲ್ಲಿ ಜೆಡಿಎಸ್ ನಾಯಕರು ಇದ್ದಾರೆ. ಒಟ್ಟಾರೆ ಇಂದಿನ ಮತ ಎಣಿಕೆ ಲೆಕ್ಕಾಚಾರ ಯಾರ ಗೆಲುವನ್ನು ನಿರ್ಧರಿಸಲಿದೆ ಎಂಬುದಕ್ಕೆ ಕೆಲ ಗಂಟೆಗಳಲ್ಲಿ ಉತ್ತರ ಸಿಗಲಿದೆ.