ಬೆಂಗಳೂರು: ದ್ವಿಚಕ್ರ ವಾಹನಗಳನ್ನ OLX ನಲ್ಲಿ ಪಡೆದು ಗ್ರಾಹಕರಿಗೆ ವಂಚಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಉತ್ತರ ವಿಭಾಗದ ಹೆಬ್ಬಾಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹಮ್ಮದ್ ಸಲೀಂ ಬಂಧಿತ ಆರೋಪಿ. ಸನತ್ ಕುಮಾರ್ ಭಟ್ಟ ಎಂಬುವವರು ಕೆಎ 31_ವಿ 9009 ಯಮಹಾ ಎಫ್.ಜೆಡ್.ಎಸ್ ಅನ್ನು OLX ನಲ್ಲಿ ಮಾರಾಟಕ್ಕೆ ಎಂದು ಜಾಹೀರಾತು ಹಾಕಿದ್ದರು. ಇದನ್ನ ನೋಡಿದ ಆರೋಪಿ ಬೈಕ್ ಖರಿದಿಸುತ್ತೇನೆ ಎಂದು ನಂಬಿಸಿ, ತನ್ನ ಹೆಸರು ರಾಹುಲ್ ಎಂದು ಪರಿಚಯ ಮಾಡಿಕೊಂಡು ಸನತ್ ಕುಮಾರ್ ಅವರನ್ನ ಭೇಟಿಯಾಗಿದ್ದ. ನಂತರ ನೈಸ್ ಆಗಿ ಮಾತಾಡಿ, ಬೈಕ್ ಪಡೆದು ಮನೆಯವರಿಗೆ ಬೈಕ್ ತೋರಿಸಬೇಕೆಂದು ಹೇಳಿ ಬೈಕ್ ಸಮೇತ ಎಸ್ಕೇಪ್ ಆಗಿದ್ದ. ಹೀಗಾಗಿ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಆರೋಪಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತನಿಖೆ ವೇಳೆ, ಆರೋಪಿಯ ಅಸಲಿ ವಿಚಾರ ಬಯಲಿಗೆ ಬಂದಿದ್ದು, ಈತ ಇದೇ ರೀತಿ, ಹಲವರಿಗೆ ಮೋಸ ಮಾಡಿರುವುದು, ತಿಳಿದು ಬಂದಿದೆ. ಹಾಗೆಯೇ ಆರೋಪಿ ವಿಚಾರಣೆಯಿಂದ ಹೆಬ್ಬಾಳ, ಬಾಣಸಾವಡಿ, ಕೊತ್ತನೂರು, ಮಾರತ್ತ ಹಳ್ಳಿ ಪೊಲಿಸ್ ಠಾಣೆಯಲ್ಲಿ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿದ್ದು, ಬಂಧಿತ ಆರೋಪಿಯಿಂದ 5 ಲಕ್ಷ ರೂ. ಬೆಲೆಬಾಳುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.