ಬೆಂಗಳೂರು: 20 ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ನ 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ 15 ಸ್ಥಾನಗಳಲ್ಲಿ ನಿಶ್ಚಿತವಾಗಿ ಗೆಲ್ಲಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಜಿಲ್ಲಾ ಪ್ರವಾಸಕ್ಕೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ವಾತಾವರಣ ನಮಗೆ ತುಂಬಾ ಅನುಕೂಲಕರವಾಗಿದೆ. ನಾವು ಚುನಾವಣೆ ನಡೆಯುತ್ತಿರುವ 25 ಸ್ಥಾನಗಳಲ್ಲಿ 20 ಕಡೆ ಮಾತ್ರ ಸ್ಪರ್ಧೆ ಮಾಡಿದ್ದೇವೆ. ಅದರಲ್ಲಿ 15 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದರು.
ದಾವಣಗೆರೆ, ಶಿವಮೊಗ್ಗ ಪ್ರವಾಸ:
ಪರಿಷತ್ನ ಚುನಾವಣೆ ಹಿನ್ನೆಲೆ ಇಂದಿನಿಂದ ನ.29ರವರೆಗೆ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆ ವ್ಯಾಪ್ತಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರವಾಸ ಕೈಗೊಂಡು ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.
ಇಂದು (ಬುಧವಾರ) ಮಧ್ಯಾಹ್ನ 12.30ಕ್ಕೆ ಚನ್ನಗಿರಿ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ಸದಸ್ಯರು ಸಮಾವೇಶದಲ್ಲಿ ಭಾಗವಹಿಸಲಿರುವ ಮಾಜಿ ಸಿಎಂ ಯಡಿಯೂರಪ್ಪ, ಮಧ್ಯಾಹ್ನ 3 ಗಂಟೆಗೆ ಸಂತೆಬೆನ್ನೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಂಜೆ ಶಿವಮೊಗ್ಗದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ನಾಳೆ(ಗುರುವಾರ) ಬೆಳಗ್ಗೆ 11 ಗಂಟೆಗೆ ಶಿಕಾರಿಪುರದಲ್ಲಿ ನಡೆಯಲಿರುವ ಶಿಕಾರಿಪುರ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ಸದಸ್ಯರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಶಿರಾಳಕೊಪ್ಪದಲ್ಲಿ ನಡೆಯಲಿರುವ ಶಿಕಾರಿಪುರ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ಸದಸ್ಯರ ಸಮಾವೇಶದಲ್ಲಿ ಭಾಗವಹಿಸಿ ಶಿಕಾರಿಪುರದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ದಾವಣಗೆರೆಯಲ್ಲಿ ನಡೆಯುವ ದಾವಣಗೆರೆ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ಸದಸ್ಯರ ಸಮಾಜದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 6 ಗಂಟೆಗೆ ಮಾಯಕೊಂಡ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ಸದಸ್ಯರ ಸಮಾವೇಶ ಮಾಯಕೊಂಡದಲ್ಲಿ ನಡೆಯಲಿದ್ದು ಅಲ್ಲಿ ಭಾಗವಹಿಸಲಿರುವ ಯಡಿಯೂರಪ್ಪ ಶಿವಮೊಗ್ಗಕ್ಕೆ ವಾಪಸ್ ಆಗಿ ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಶನಿವಾರ ತೀರ್ಥಹಳ್ಳಿಯಲ್ಲಿ ಸಮಾವೇಶ
ಶನಿವಾರ ಬೆಳಗ್ಗೆ 10.30 ಕ್ಕೆ ಶಿವಮೊಗ್ಗದಲ್ಲಿ ನಡೆಯಲಿರುವ ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ಸದಸ್ಯರ ಸಮಾವೇಶದಲ್ಲಿ ಭಾಗವಹಿಸಲಿದ್ದು, ಮಧ್ಯಾಹ್ನ 3 ಗಂಟೆಗೆ ತೀರ್ಥಹಳ್ಳಿಯಲ್ಲಿ ನಡೆಯಲಿರುವ ತೀರ್ಥಹಳ್ಳಿ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ಸದಸ್ಯರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ರಾತ್ರಿ ಶಿವಮೊಗ್ಗದಲ್ಲಿ ವಾಸ್ತವ್ಯ ಹೂಡಲಿದ್ದು, ನ.28ರ ಭಾನುವಾರದಂದು ಬೆಳಗ್ಗೆ 11 ಗಂಟೆಗೆ ಸಾಗರದಲ್ಲಿ ನಡೆಯಲಿರುವ ಸಾಗರ ಸ್ಥಳೀಯ ಸಂಸ್ಥೆಗಳ ಸದಸ್ಯರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಸೊರಬದಲ್ಲಿ ನಡೆಯಲಿರುವ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ಸದಸ್ಯರ ಸಮಾವೇಶದಲ್ಲಿ ಭಾಗವಹಿಸಲಿದ್ದು, ಅಂದು ಶಿಕಾರಿಪುರದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ನ. 29ರ ಸೋಮವಾರ ಹೊನ್ನಾಳಿ ಕ್ಷೇತ್ರದಲ್ಲಿ ನಡೆಯಲಿರುವ ಹೊನ್ನಾಳಿ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ಸದಸ್ಯರ ಸಮಾವೇಶದಲ್ಲಿ ಭಾಗವಹಿಸಲಿರುವ ಯಡಿಯೂರಪ್ಪ ಅಂದು ಮಧ್ಯಾಹ್ನ ರಸ್ತೆ ಮಾರ್ಗದ ಮೂಲಕ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ ಆರೋಪ: ಬೆಳಗಾವಿ, ಚಿಕ್ಕಬಳ್ಳಾಪುರದಲ್ಲಿ ಎಸಿಬಿ ದಾಳಿ