ಬೆಂಗಳೂರು : ಮಹಾಮಾರಿ ಕೊರೊನಾ ವೈರಸ್ ಶೈಕ್ಷಣಿಕ ಪ್ರಗತಿಗೆ ಕೊಡಲಿ ಪೆಟ್ಟು ಕೊಟ್ಟಿದ್ದು ಸುಳ್ಳಲ್ಲ. ಶಾಲಾ-ಕಾಲೇಜು ಆರಂಭ ಮಾಡಬೇಕು ಅಂದರೆ ಅಲ್ಲಿ ಕೋವಿಡ್ ಭಯ ಬೆಂಬಿಡದೇ ಕಾಡ್ತಿತ್ತು. ಇದೀಗ ಹಂತ ಹಂತವಾಗಿ 6ನೇ ತರಗತಿಯಿಂದ ಕಾಲೇಜು ತರಗತಿಗಳು ಆರಂಭಗೊಂಡಿದ್ದು, ಪಾಠ-ಪ್ರವಚನ ನಡೆಯುತ್ತಿವೆ.
ಪ್ರಾಥಮಿಕ ಹಂತದ ಒಂದರಿಂದ 5ನೇ ತರಗತಿ ಆರಂಭಕ್ಕೂ ಕೂಗು ಕೇಳಿ ಬಂದಿದೆ. ಈಗಾಗಲೇ ಖಾಸಗಿ ಶಾಲಾ ಸಂಘಟನೆಗಳಿಂದಲೂ ಒತ್ತಾಯವೂ ಕೇಳಿ ಬಂದಿದೆ. ಆದರೆ, ಸದ್ಯ ಪ್ರಾಥಮಿಕ ತರಗತಿ ಆರಂಭಕ್ಕೆ ಗೌರಿ-ಗಣೇಶ ಹಬ್ಬ ಅಡ್ಡಿ ಆಯ್ತಾ ಎಂಬ ಪ್ರಶ್ನೆ ಮೂಡಿದೆ.
ಗೌರಿ-ಗಣೇಶ ಹಬ್ಬ ಆಚರಣೆಯಿಂದಾಗಿ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುವ ಭೀತಿಯಿಂದ ತರಗತಿ ಆರಂಭಕ್ಕೆ ಶಿಕ್ಷಣ ಸಚಿವರು ಹಾಗೂ ಇಲಾಖೆ ನಿಧಾನಗತಿಗೆ ಮುಂದಾಗಿದೆ. ವಾರಗಳ ಕಾಲ ಇಳಿಕೆಯಲ್ಲಿದ್ದ ಸೋಂಕಿತರ ಸಂಖ್ಯೆ 500ಕ್ಕೆ ಇಳಿದಿತ್ತು. ಆದರೆ, ಮತ್ತೀಗ ಸಾವಿರದ ಗಡಿ ದಾಟಿದ ಪರಿಣಾಮ ತರಗತಿ ಆರಂಭಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ.
ಕೋವಿಡ್ ಇಳಿಕೆಯಾದರೆ ಅಕ್ಟೋಬರ್ ಮೊದಲ ವಾರದಲ್ಲೇ ತರಗತಿ ಆರಂಭ
ಗಣೇಶ ಹಬ್ಬಕ್ಕೂ ಮುನ್ನ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡಿತ್ತು. ಆದರೆ, ಕಳೆದ 3 ದಿನದಿಂದ ಮತ್ತೆ ಸಾವಿರದ ಗಡಿದಾಟಿದೆ. ಹೀಗಾಗಿ, 10-15 ದಿನಗಳ ಕಾಲ ಕಾದು ನೋಡಿ ತರಗತಿ ಆರಂಭಕ್ಕೆ ಚಿಂತನೆ ನಡೆದಿದೆ. ಕೋವಿಡ್ ಸೋಂಕು ಇಳಿಕೆಯಾದರೆ ಅಕ್ಟೋಬರ್ ಒಂದರಂದು ಅಥವಾ ಮೊದಲ ವಾರದಲ್ಲೇ ತರಗತಿ ಆರಂಭಿಸಲು ಚಿಂತನೆ ನಡೆದಿದೆ. ಒಂದು ವೇಳೆ ಸೋಂಕಿನ ಪ್ರಕರಣಗಳು ಏರಿಕೆಯಾದರೆ ಆನ್‌ಲೈನ್ ಪಾಠವೇ ಮುಂದುವರೆಯಲಿದೆ.
ಅಧಿವೇಶನದ ನಂತರ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆ
1-5ನೇ ತರಗತಿ ತೆರೆಯುವ ಸಂಬಂಧ ಮಾಹಿತಿ ನೀಡಿರುವ ಶಿಕ್ಷಣ ಸಚಿವ ನಾಗೇಶ್, ಈ ಬಗ್ಗೆ ಈವರೆಗೂ ಸಭೆ ಮಾಡಿಲ್ಲ. ಸದನ ಮುಗಿಯುವವರೆಗೂ ಯಾವುದೇ ತೀರ್ಮಾನ ಮಾಡೋದಿಲ್ಲ. 3ನೇ ಅಲೆ ಬಗ್ಗೆ ಸರ್ಕಾರ ಗಮನ ಹರಿಸುತ್ತಿದೆ. ಮಕ್ಕಳ ಮೇಲೆ ಪರಿಣಾಮ ಬೀರಬಹುದಾದ ಬಗ್ಗೆ ಚರ್ಚೆ ನಡೆಯುತ್ತಿದೆ. ಇತ್ತ ಟಾಸ್ಕ್ ಪೋರ್ಸ್ ಕೂಡ ತುಂಬಾ ಗಂಭೀರವಾಗಿ ಅಧ್ಯಯನ ಮಾಡುತ್ತಿದೆ ಎಂದು ಹೇಳಿದ್ದಾರೆ.
ಮೂಲಗಳ ಪ್ರಕಾರ, ಅಧಿವೇಶನ ಮುಗಿದ ನಂತರ ಸಿಎಂ ಬಸವರಾಜ ಬೊಮ್ಮಯಿ ನೇತೃತ್ವದಲ್ಲಿ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆ ನಡೆಸಲಿದ್ದಾರೆ. ಸಮಿತಿ ನೀಡುವ ಸಲಹೆ ಸೂಚನೆ ಮೇರೆಗೆ ತರಗತಿ ಆರಂಭ ಮಾಡುವ ಕುರಿತು ಅಧಿಕೃತ ಆದೇಶ ಹೊರಬೀಳಲಿದೆ. ಒಂದು ವೇಳೆ ಕೊರೊನಾ ಪಾಸಿಟಿವಿಟಿ ದರ ಏರಿಕೆಯಾದರೆ ಪ್ರಾಥಮಿಕ ತರಗತಿ ತೆರೆಯುವ ವಿಚಾರ ಮುಂದೂಡಲಾಗುತ್ತೆ.
ಇದನ್ನೂ ಓದಿ: ಶಿಕ್ಷಕರ ಹುದ್ದೆಗೆ ಸರಿಸಮಾನ ವೇತನ: ಸಿಎಂ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಸಚಿವ ಬಿ.ಸಿ.ನಾಗೇಶ್