ಬೆಂಗಳೂರು: ಎಂಎಲ್‌ಎಗಳು, ಎಂಪಿಗಳು ಹೇಳಿದ್ದೆಲ್ಲಾವನ್ನು ಅಧಿಕಾರಿಗಳು ಕೇಳೋದಾದ್ರೆ ನಾನೊಂದು ಐದಾರು ಜನರ ತಲೆ ತೆಗಿಯಬೇಕಿದೆ ಅನುಮತಿ ಕೊಡ್ಸಿ ಎಂದು ಶಾಸಕ ರಮೇಶ್ ಕುಮಾರ್ ಅವರು ಸ್ಪೀಕರ್‌ಗೆ ಮನವಿ ಮಾಡಿದ ಪ್ರಸಂಗ ವಿಧಾನಸಭೆ ಕಲಾಪದಲ್ಲಿಂದು ನಡೆಯಿತು.
ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ಹಂಪ್ಸ್ ಹಾಕಿರುವ ಬಗ್ಗೆ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ರಮೇಶ್ ಕುಮಾರ್, ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ 33 ಅಲ್ಲ 52 ಕಿಲೋ ಮೀಟರ್‌ಗೆ 47 ಸ್ಪೀಡ್ ಹಂಪ್ಸ್ ಹಾಕಲಾಗಿದೆ. ಈ ಬಗ್ಗೆ ಒಂದೇ ವರ್ಷದಲ್ಲಿ 2ನೇ ಬಾರಿ ಪ್ರಶ್ನೆ ಮಾಡುತ್ತಿದ್ದೇನೆ. ನಿಮ್ಮ ಇಲಾಖೆ ಅಧಿಕಾರಿಗಳಿಗೆ ಎಷ್ಟು ಧೈರ್ಯ. ಇದಕ್ಕೆ ಏನಾದ್ರೂ ವಿಧಿವಿಧಾನಗಳು ಇದೆಯಾ, ನಿಮಗೆ ಉತ್ತರ ಕೊಟ್ಟು ಕಳುಹಿಸುತ್ತಾರೆ ಅಲ್ವಾ. ನೀವು ಬನ್ನಿ, ಅವೈಜ್ಞಾನಿಕ ಅಂತಾರಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.
ಈ ರೋಡ್‌ಗೆ ವಾರಸುದಾರರು ಯಾರು? ಅವೈಜ್ಞಾನಿಕ ಸ್ಪೀಡ್ ಹಂಪ್ಸ್ಗಳು ಅಂತ ಕೂಟ್ಟಿದ್ದಾರೆ. ನಿಮ್ಮ ಜೆಇಗಳು ಇರೋದಿಲ್ವಾ, ಎಡಬ್ಲ್ಯೂ ಇಲ್ವಾ, ಎಕ್ಸಿಕೂಟಿವ್ ಇಂಜಿನಿಯರ್‌ಗಳು ಇಲ್ವಾ? ಅವರ ಆಸ್ತಿ ಅಲ್ವಾ ಅದು. ಪ್ರತಿ ಕಿಲೋ ಮೀಟರ್, ಅರ್ಧ ಕಿಲೋ ಮೀಟರ್‌ಗೆ ಸ್ಪೀಡ್ ಹಂಪ್ಸ್ ಹಾಕಿಸುತ್ತಾರೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರಸ್ತೆ ಯಾಕೆ ಮಾಡಿಸಬೇಕು. ಜೆಇಗಳು, ಎಡಬ್ಲ್ಯೂಗಳು ಒಂದು ದಿನ ಕೂಡ ರಸ್ತೆ ಕಡೆ ಹೋಗಿಲ್ಲ. ಸದನಕ್ಕೆ ಮರ್ಯಾದೆ ಬರಬೇಕಾದರೆ, ಪ್ರಶ್ನೋತ್ತರಕ್ಕೆ ಒಂದು ಗೌರವ ಬರಬೇಕಾದರೆ. ಎಕ್ಸಿಕ್ಯೂಟಿವ್ ಇಂಜಿನಿಯರ್‌ನಿಂದ ಹಿಡಿದು ಎಲ್ಲರನ್ನೂ ಅಮಾನತು ಮಾಡಿ. ಆಗ ದುರಹಂಕಾರದ ರೀತಿಯಲ್ಲಿ ಅಧಿಕಾರಿಗಳು ನಡೆದುಕೊಳ್ಳುವುದಿಲ್ಲ ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್, ಬೇರೆ ಬೇರೆ ಸಂದರ್ಭದಲ್ಲಿ ನಾನು ಪ್ರವಾಸ ಮಾಡಿದಾಗ ಸ್ಥಳೀಯರ ಆಗ್ರಹ, ಬೇಡಿಕೆಗಳ ಮೇರೆಗೆ ಅವರೇ ರಸ್ತೆಗೆ ಸ್ಪೀಡ್ ಹಂಪ್ಸ್ ಹಾಕಿಕೊಳ್ಳುವ ರೀತಿಯಿಂದ ನಮಗೆ ಬಹಳ ಇಕ್ಕಟ್ಟಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಎಂಎಲ್‌ಎಗಳು, ಎಂಪಿಗಳು ಹೇಳುವ ಮಟ್ಟಕ್ಕೆ ಬಂದ್ಬಿಟ್ಟಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್ ಕುಮಾರ್, ಹಾಗಾದರೆ ಎಂಎಲ್‌ಎಗಳು, ಎಂಪಿಗಳು ಹೇಳೋದೆಲ್ಲಾ ಮಾಡೋದಾದ್ರೆ ನಾನೊಂದು ಐದಾರು ಜನರ ತಲೆ ತೆಗಿಬೇಕಿದೆ ಪರ್ಮೀಷನ್ ಕೊಡ್ಸಿ ಎಂದರು. ದಿಸ್ ಈಸ್ ಟೂಮಚ್. ಒಂದು ಗ್ರಾಮದಲ್ಲಿ ಅಪಘಾತ ಆಗುತ್ತೆ. ಅಲ್ಲಿ ಮೂರು ದಿನ ರೌಡಿಗಳು ಬರೋದು. ಅವರು ಗಲಾಟೆ ಮಾಡಿದರೆ ಆ ರೌಡಿಗಳಿಗೆ ಹೆದರಿ ಅಲ್ಲೊಂದು ಸ್ಪೀಡ್ ಹಂಪ್ಸ್ ಹಾಕಿಸೋದು. ಯಾರ ಕೈಗೆ ಕೊಟ್ಟಿದ್ದೀರಿ ನೀವು ರಾಜ್ಯವನ್ನ?. ಹಾಗಾದರೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಇಲಾಖೆಯಿಂದ ರಸ್ತೆಯಾಕೆ ಮಾಡಿಸ್ತೀರಿ?. ರೋಡುಗಳನ್ನೆಲ್ಲವನ್ನು ಅವರಿಗೆ ಕೊಟ್ಬೀಡಿ. ಎಲ್ಲಿ ಬೇಕಾದರೂ ಉಳುಮೆ ಮಾಡಿಕೊಳ್ಳಿ. ಎಲ್ಲಿ ಬೇಕಾದ್ರೆ ಅಲ್ಲಿ ಸ್ಪೀಡ್ ಹಂಪ್ಸ್ ಹಾಕ್ಸಿಕೊಳ್ಳಲಿ ಎಂದು ರಮೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಸ್ಪೀಕರ್ ಮಾತನಾಡಿ, ಅಧಿಕಾರಿಗಳು ಶಾಸಕರು ಮೇಲೆ ಆರೋಪಿಸುತ್ತಾರೆ. ಜನರು ಕೇಳಿದಾಗ ನಿಮ್ಮ ಶಾಸಕರ ಕಡೆಯಿಂದ ಹೇಳಿಸಿ ಎಂದು ಅಧಿಕಾರಿಗಳು ಮಾಡುತ್ತಾರೆ. ಅಧಿಕಾರಿಗಳು ಕಾನೂನಿನ ಅಂಶವನ್ನು ಅನುಷ್ಠಾನಕ್ಕೆ ತರುವಾಗ ಜನಪ್ರತಿನಿಧಿನಗಳನ್ನು ಕೇಳ್ರಿ, ಹೇಳ್ರಿ ಅಂತ ಜನರಿಗೆ ಹಚ್ಚಿಕೊಡೋದು ಇದೆಯಲ್ವಾ. ಇದರಿಂದ ನಮಗೆ ಸಮಸ್ಯೆ, ಅಧಿಕಾರಿಗಳು ಸೇಫ್ ಆಗ್ತಾರೆ ಎಂದರು. ಹೊಸ ಸಚಿವರು ಏನಾದ್ರೂ ಮಾಡಿ ಅಂತ ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್‌ಗೆ ಹೇಳಿದರು.
ಈ ವೇಳೆ ಮಾತನಾಡಿದ ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಎಸ್ಪಿಗಳಿಗೆ ರಸ್ತೆ ಹಂಪ್ಸ್ ಸಮಸ್ಯೆಗಳನ್ನು ಸರಿಪಡಿಸುವಂತೆ ಸೂಚಿಸಲಾಗಿದೆ. ಈ ಸಮಸ್ಯೆ ಒಂದೇ ದಿನದಲ್ಲಿ ಸೃಷ್ಟಿಯಾಗಿದ್ದಲ್ಲ ಎಂದು ಸಮಜಾಯಿಸಿ ನೀಡಿದರು.