ಬೆಂಗಳೂರು: ಆಸ್ಪತ್ರೆಯಿಂದ ಇಂದು ಬಿಡುಗಡೆಗೊಂಡಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ವಿವಿಧ ನಾಯಕರನ್ನು ಭೇಟಿ ಮಾಡಿದರು. ಶಿವಕುಮಾರ್ ಅವರು ತಮ್ಮ ಸೋದರ ಹಾಗೂ ಸಂಸದ ಡಿ.ಕೆ.ಸುರೇಶ್ ಅವರ ಜೊತೆ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರನ್ನು ಭಾನುವಾರ ಭೇಟಿ ಮಾಡಿ ಮಾತುಕತೆ ನಡೆಸಿದರು.

ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಇದೇ ಸಂದರ್ಭ ಹಾಜರಿದ್ದರು. ರಾಜ್ಯ ರಾಜಕೀಯ ಪ್ರಗತಿ ಹಾಗೂ ಇತರೆ ವಿಚಾರಗಳ ಬಗ್ಗೆ ಇದೇ ಸಂದರ್ಭ ನಾಯಕರು ಚರ್ಚಿಸಿದ್ದಾರೆ. ಉಪಚುನಾವಣೆ ಹಾಗೂ ಇತ್ಯಾದಿ ವಿಚಾರಗಳ ಜೊತೆ ಮೂಲ ಕಾಂಗ್ರೆಸ್ಸಿಗರಿಗೆ ರಾಜ್ಯದಲ್ಲಿ ಇರುವ ಅಡೆತಡೆಗಳ ಕುರಿತು ಕೂಡ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ.
ಎನ್ ಎಸ್ ಯು ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುರಭಿ ದ್ವಿವೇದಿ, ಕಾರ್ಯದರ್ಶಿ ಶಾದಾಬ್ ಖಾನ್, ಕರ್ನಾಟಕ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ ಅವರು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಭಾನುವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಮಂಜುನಾಥಗೌಡ ಟಿಕೆಟ್ ನೀಡುವುದರ ಬಗ್ಗೆ ಈ ಸಂದರ್ಭದಲ್ಲಿ ಬೇಸರ ತೋಡಿ ಕೊಂಡಿದ್ದಾರೆ ಎಂಬ ಮಾಹಿತಿಯಿದೆ.