ಬೆಂಗಳೂರು: ಆಗಸ್ಟ್ 20ರಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ತಮಿಳುನಾಡಿನ ಪೆರಂಬದೂರಿನಿಂದ ಆರಂಭವಾಗಿರುವ '29ನೇ ರಾಜೀವ್ ಗಾಂಧಿ ಸದ್ಭಾವನಾ ಜ್ಯೋತಿ ಯಾತ್ರೆ' ಇಂದು ಬೆಂಗಳೂರಿಗೆ ಆಗಮಿಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು.
ಈ ವೇಳೆ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಕೇಂದ್ರದ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ, ಎಸ್.ಎಸ್.ಪ್ರಕಾಶಂ ಮತ್ತಿತರರು ಉಪಸ್ಥಿತರಿದ್ದರು.
ಈ ಜ್ಯೋತಿ ಯಾತ್ರೆಯು ನಾನಾ ರಾಜ್ಯಗಳ ಮಾರ್ಗವಾಗಿ ನವದೆಹಲಿ ತಲುಪಲಿದೆ. ತಮಿಳುನಾಡಿನ ಶ್ರೀಪೆರಂಬದೂರಿನ ರಾಜೀವ್ ಗಾಂಧಿ ಸ್ಮಾರಕದ ಬಳಿ ಜ್ಯೋತಿಯನ್ನು ಉದ್ಘಾಟಿಸಿ, ಅತ್ತಿಬೆಲೆ, ಬೊಮ್ಮನಹಳ್ಳಿ ಮಾರ್ಗವಾಗಿ ಬೆಂಗಳೂರು ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಗೆ ತರಲಾಯಿತು. ಬಳಿಕ ಡಿ.ಕೆ.ಶಿವಕುಮಾರ್ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜ್ಯೋತಿಯನ್ನು ಸ್ವೀಕರಿಸಿದರು. ಇದಾದ ಬಳಿಕ ಅವರು ಶೇಷಾದ್ರಿಪುರಂನಲ್ಲಿರುವ ರಾಜೀವ್ ಗಾಂಧಿ ಪ್ರತಿಮೆಗೆ ಹೂಮಾಲೆ ಅರ್ಪಿಸಿದರು. ನಂತರ ಯಾತ್ರೆಯನ್ನು 25 ಕಾರ್ಯಕರ್ತರ ತಂಡ ರೈಲಿನ ಮುಖಾಂತರ ದೆಹಲಿಯತ್ತ ಕೊಂಡೊಯ್ಯಲಾಯಿತು.
ಬಳಿಕ ಮಾಧ್ಯಮಗಳೊಂದಿಗೆ ಪುಲಕೇಶಿನಗರ ಗಲಭೆ ಕುರಿತು ಮಾತನಾಡಿದ ಡಿಕೆಶಿ, ಪ್ರಸನ್ನ ಕುಮಾರ್ ಅವರನ್ನು ಕಾಂಗ್ರೆಸ್ಗೆ ಕರೆತರುವ ವಿಚಾರ ಎಲ್ಲೂ ಹೇಳಿಲ್ಲ. ನಾವು ಯಾರಿಗೂ ಸೀಟು ಕೊಡುವ ಚಿಂತನೆಯಲ್ಲಿ ಇಲ್ಲ. ಸುಮ್ಮನೆ ರಾಜಕೀಯ ಮಾತುಗಳು ಹರಿದಾಡುತ್ತಿವೆ. ಗಲಭೆ ಪ್ರಕರಣದಲ್ಲಿ ಬಿಜೆಪಿಯವರು ಸರಿಯಾಗಿ ಕಾನೂನು ಕ್ರಮ ತೆಗೆದುಕೊಳ್ಳಲಿಲ್ಲ. ಸುಮ್ಮನೆ ಏನೇನೋ ಊಹಾಪೋಹ ಮಾಡುತ್ತಿದ್ದಾರೆ. ಪ್ರಸನ್ನ ಕುಮಾರ್ ಮಲಗಿರೋರು. ಅವರನ್ನ ಯಾಕೆ ಎಬ್ಬಿಸೋಕೆ ಹೋಗುತ್ತಿದ್ದೀರಾ ಎಂದರು.
ಗಲಭೆ ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕು ಎಂದು ಅಖಂಡ ಶ್ರೀನಿವಾಸ್ ಮೂರ್ತಿ ಒತ್ತಾಯ ವಿಚಾರವಾಗಿ ಮಾತನಾಡಿ, ನಮ್ಮ ಪಕ್ಷದ ಸ್ಟಾಂಡ್ ಏನು ಅನ್ನೋದನ್ನ ಹೇಳಿದ್ದೇವೆ. ಅವರ ಹೇಳಿಕೆಯ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ದೆಹಲಿಗೆ ತೆರಳುವ ವಿಚಾರದ ಬಗ್ಗೆ ಮಾತನಾಡಿ, ದೆಹಲಿಗೆ ಹೋಗಿ ನಾಲ್ಕು ತಿಂಗಳಾಗಿದೆ. ಈಗ ದೆಹಲಿಗೆ ಹೋಗುತ್ತಿದ್ದೇನೆ. ಒಂದೆರಡು ದಿನ ಇದ್ದು, ನಾಯಕರ ಭೇಟಿ ಮಾಡುತ್ತೇನೆ. ರಾಜ್ಯದ ವಿದ್ಯಮಾನಗಳನ್ನು ಅವರಿಗೆ ತಿಳಿಸುತ್ತೇನೆ. ಅಧ್ಯಕ್ಷನಾದ ಬಳಿಕ ದೆಹಲಿಗೆ ಭೇಟಿ ನೀಡಿರಲಿಲ್ಲ ಎಂದರು.