ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ ಎಚ್.ಎಸ್. ದೊರೆಸ್ವಾಮಿ ನೇತೃತ್ವದಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ಬೃಹತ್ ಮೆರವಣಿಗೆ ಹಾಗೂ ಸ್ವಾತಂತ್ರ್ಯ ದಿನಾಚರಣೆಯನ್ನು ಮಲ್ಲೇಶ್ವರಂನ ಶಿರೂರು ಗ್ರೌಂಡ್ನಲ್ಲಿ ಏರ್ಪಡಿಸಲಾಗಿತ್ತು.
"ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ" ಎಂಬ ಘೋಷವಾಕ್ಯದಡಿ, ಅಹೋರಾತ್ರಿ ಬಡವರ ಸ್ವಾತಂತ್ರ್ಯೋತ್ಸವ ನಡೆಯಿತು. ವಸತಿ ಸಂಬಂಧಿತ ಬಡವರ ಸಮಸ್ಯೆಗಳನ್ನು ನಡುರಾತ್ರಿ ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ ತಮ್ಮ ಹಕ್ಕುಗಳನ್ನು ಸರ್ಕಾರವು ಇನ್ನು ತ್ವರಿತವಾಗಿ ಬಗೆಹರಿಸುವ ಕಾರ್ಯಸೂಚಿ ತರಬೇಕು ಎಂದು ತಮ್ಮ ಬೇಡಿಕೆಯನ್ನು ಇಟ್ಟರು.
ಬಡವರ ಭೂಮಿ ಮತ್ತು ವಸತಿ ಸಮಸ್ಯೆಗಳ ಹಕ್ಕೊತ್ತಾಯ ಪತ್ರವನ್ನು ಹಲವಾರು ವರ್ಷಗಳಿಂದ ಮುಖ್ಯಮಂತ್ರಿಗಳಿಗೆ ನೀಡಿದರೂ, ಸರ್ಕಾರದ ಉನ್ನತ ಸಮಿತಿ ಸರಿಯಾಗಿ ಕರ್ತವ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಬಂದಾಗಿನಿಂದಲೂ ಇದುವರೆಗೂ ಬಡ ಜನರು ಪರಿತಪಿಸುವಂತೆ ಮಾಡಿದೆ ಎಂದು ಹೇಳಿದರು.
ಭೂಮಿ - ಮನೆಗಳಿಲ್ಲದ ಲಕ್ಷಾಂತರ ಕುಟುಂಬಗಳ ಬಡ ಜನತೆ ರಾಜ್ಯಾದ್ಯಂತ ಇಂದಿಗೂ ಲಕ್ಷಾಂತರ ಕುಟುಂಬಗಳ ಬಡಜನತೆ ಸಮಸ್ಯೆ ಪರಿಹಾರಕ್ಕಾಗಿ ಸ್ವಾತಂತ್ರ್ಯ ಬಂದ ಕಾಲದಿಂದ ಅನೇಕಾನೇಕ ಹೋರಾಟಗಳು ನಡೆಯುತ್ತಾ ಬಂದಿದ್ದು, ಹೋರಾಟಗಳ ಫಲವಾಗಿಯೇ ಅಂದಿನ ಸರ್ಕಾರಗಳು 'ಅಕ್ರಮ-ಸಕ್ರಮ' ಯೋಜನೆ ಘೋಷಿಸಿದ್ದಾರೆ ಎಂದರು.
ಫ್ಲಾಗ್ ಶಿಪ್ ಬೈಕರ್ಸ್: ದೇಶ 73ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಇರುವ ಈ ಸಂದರ್ಭದಲ್ಲಿ, ಸ್ವಾತಂತ್ರ ದಿನವನ್ನು ವಿಭಿನ್ನವಾಗಿ ಫ್ಲಾಗ್ ಶಿಪ್ ಬೈಕರ್ಸ್ ಎಂಬ ಬೈಕರ್ಸ್ ಸಮೂಹ, ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಬೈಕ್ ರಾಲಿ ಮಾಡುವ ಮೂಲಕ ಆಚರಿಸಿದರು.
ನಗರದ ಟೌನ್ ಹಾಲ್ನಲ್ಲಿ ಸೇರಿದ್ದ ಇನ್ನೂರಕ್ಕೂ ಹೆಚ್ಚು ಬೈಕರ್ಗಳು ಸ್ವಾತಂತ್ರ ದಿನವನ್ನ ವಿಭಿನ್ನವಾಗಿ ಆಚರಿಸಿದರು. ಬೈಕ್ ಜಾಥಾದ ಮೂಲಕ ಜನರಲ್ಲಿ ವನ್ಯಜೀವಿಗಳು ಮತ್ತು ಕಾಡು ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದರು. ಕಾರ್ಯಕ್ರಮಕ್ಕೂ ಮುನ್ನ ಪ್ರತಿಯೊಬ್ಬರೂ ಮೇಣದಬತ್ತಿ ಹಚ್ಚುವ ಮೂಲಕ ಉತ್ತರ ಕರ್ನಾಟಕ ನೆರೆಗೆ ಸಿಲುಕಿ ಮೃತರಾದ ರೈತರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಪ್ರತಿ ವಾರಾಂತ್ಯದಲ್ಲಿ ಹೋಗುವಂತಹ ಬೈಕ್ರೈಡ್ ಗಳಿಗಿಂತ ವಿಭಿನ್ನವಾಗಿ ಸ್ವಾತಂತ್ರ್ಯೋತ್ಸವ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಬೇರೆ ಬೈಕ್ ಅಸೋಸಿಯೇಷನ್ಗಳಿಗೆ ಮಾದರಿಯಾದರು.
ಹಿಂದೂ ಜಾಗರಣ ವೇದಿಕೆ: ಈ ವೇದಿಕೆ ಪ್ರತಿ ವರ್ಷವೂ ಮಧ್ಯರಾತ್ರಿಯೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತ ಬಂದಿದೆ. ಬೆಂಗಳೂರಿನ ಬನ್ನಪ್ಪ ಪಾರ್ಕ್ನಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ ಮನೆ ಮಾಡಿತ್ತು. ಬೈಕ್ ಜಾಥಾ ಉದ್ದೇಶಿಸಿ ಸರ್ದಾರ್ ಮಣಿಂದರ್ ಸಿಂಗ್ ಮಾತನಾಡಿದರು.