ಬೆಂಗಳೂರು: ನಗರದ ಚಾಮರಾಜಪೇಟೆಯ ಈದ್ಗಾ ಮೈದಾನಕ್ಕೆ ವಿವಾದ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಮೈದಾನದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಗೆ ಒಪ್ಪಿಗೆ ನೀಡುವಂತೆ ಹಿಂದೂಪರ ಸಂಘಟನೆಗಳು ಬಿಬಿಎಂಪಿಗೆ ಮನವಿ ಮಾಡಿದ್ದು, ಈಗ ಮಂಗಳವಾರ ತೀರ್ಮಾನ ಪ್ರಕಟಿಸುವಂತೆ ಪಾಲಿಕೆಗೆ ಒತ್ತಡ ಹೇರುತ್ತಿವೆ.
ಸದ್ಯ ಮೈದಾನದ ವಿಚಾರದಲ್ಲಿ ಬಿಬಿಎಂಪಿ ತಟಸ್ಥ ನಿಲುವು ತಾಳಿದೆ. ಸ್ವಾತಂತ್ರ್ಯ ದಿನಾಚರಣೆ, ಗಣೇಶ ಚತುರ್ಥಿ, ಕನ್ನಡ ರಾಜ್ಯೋತ್ಸವ ಸೇರಿದಂತೆ ಹಲವು ಹಿಂದೂ ಆಚರಣೆಗಳಿಗೆ ಅನುಮತಿ ಕೋರಿ ಮನವಿ ಪತ್ರ ಸಲ್ಲಿಸಿದ್ದು, ಅನುಮತಿ ನೀಡಬೇಕು ಅಥವಾ ತಿರಸ್ಕರಿಸಬೇಕು ಅದನ್ನೂ ಮಂಗಳವಾರ ಮಧ್ಯಾಹ್ನದ ಒಳಗೆ ಪ್ರಕಟಿಸಬೇಕು ಎಂದು ವಿಶ್ವ ಸನಾತನ ಪರಿಷತ್ ಪಟ್ಟು ಹಿಡಿದಿದೆ. ಇಲ್ಲದಿದ್ದರೆ ಕೋರ್ಟ್ ಮೆಟ್ಟಿಲು ಏರಲು ತೀರ್ಮಾನಿಸಿದೆ.
ಸದ್ಯ ಮೈದಾನ ನೀಡುವ ವಿಚಾರದಲ್ಲಿ ಬಿಬಿಎಂಪಿ ತಟಸ್ಥವಾಗಿದೆ. ನಮಗೆ ಅವಕಾಶ ಕೊಡದಿದ್ದರೇ ಯಾರಿಗೂ ಕೊಡಬೇಡಿ. ನಮಾಜ್ಗೆ ಅನುಮತಿ ನೀಡುವುದಾದರೆ ನಮ್ಮ ಕಾರ್ಯಕ್ರಮಗಳಿಗೂ ಕೊಡಿ. ಇಲ್ಲವಾದರೆ ಯಾರಿಗೂ ಅನುಮತಿ ಕೊಡಬೇಡಿ ಎಂದು ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ.
ಪೊಲೀಸ್ ಸರ್ಪಗಾವಲು : ಮೈದಾನದ ಸುತ್ತ ಪೊಲೀಸರ ನಿಯೋಜನೆ ಮಾಡಲಾಗಿದ್ದು, ಸಿಸಿಟಿವಿ ಅಳವಡಿಕೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮೈದಾನಕ್ಕೆ ಭದ್ರತೆ ನೀಡಲಾಗಿದೆ. 2 ಕೆಎಸ್ಆರ್ಪಿ ತುಕಡಿ, 2 ಹೊಯ್ಸಳ ವಾಹನ ಸೇರಿದಂತೆ 30ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಮೈದಾನದ ಬಳಿ ಪ್ರತಿಭಟನೆ, ಘೋಷಣೆಗೆ ಅವಕಾಶವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನೆಟ್ಟಿದ್ದ ಕಂಬ ನೆಲಸಮ : ಮೈದಾನದಲ್ಲಿ ಶನಿವಾರ ಸಂಜೆ ಸಿಸಿಟಿವಿ ಅಳವಡಿಸಲು ನೆಟ್ಟಿದ್ದ ಕಂಬ ಏಕಾಏಕಿ ನೆಲಸಮವಾಗಿರುವುದು ಬೆಳಕಿಗೆ ಬಂದಿದೆ. ಬಿಬಿಎಂಪಿಯು ಚಾಮರಾಜಪೇಟೆಯ ಈದ್ಗಾ ಮೈದಾನದ ಸುತ್ತಮುತ್ತ ಸುಮಾರು 16 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಮುಂದಾಗಿದೆ. ಮೈದಾನದ ಸುತ್ತ ಪಾಲಿಕೆ ಸಿಬ್ಬಂದಿ ಒಟ್ಟು 3 ಕಂಬ ನೆಟ್ಟಿದ್ದರು. ಆದರೆ, ದುಷ್ಕರ್ಮಿಗಳು ರಾತ್ರೋರಾತ್ರಿ ಅವುಗಳನ್ನು ಧರೆಗೆ ಉರುಳಿಸಿದ್ದು, ವಾಗ್ವಾದ ನಡೆಸಿದ್ದ ಸ್ಥಳೀಯರೇ ಈ ಕೃತ್ಯ ನಡೆಸಿದ್ದಾರಾ ಅಥವಾ ಬೇರೆ ಕಡೆಯಿಂದ ಬಂದವರು ಕಂಬ ಕಿತ್ತಿದ್ದಾರಾ ಎನ್ನುವುದರ ಕುರಿತು ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ : ಈದ್ಗಾ ಮೈದಾನ ವಿವಾದ: ಬಿಬಿಎಂಪಿಗೆ ದಾಖಲೆ ಸಲ್ಲಿಸಿದ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್