ಬೆಂಗಳೂರು: ಕೊರೊನಾ ವೈರಸ್ ಕಳೆದ ಎರಡು ವರ್ಷದಿಂದ ಸತತವಾಗಿ ಕಾಡುತ್ತಿದೆ. ಬಹುಬೇಗ ಹರಡುವ ಈ ವೈರಾಣುವಿಗೆ ಅಸ್ತ್ರವಾಗಿ ಬಂದಿದ್ದು ಕೋವಿಡ್ ಲಸಿಕೆ. ರೋಗದಿಂದ ಪಾರು ಮಾಡುವ ಶಕ್ತಿ ಈ ಲಸಿಕೆಗೆ ಇಲ್ಲದೇ ಇದ್ದರೂ, ಸೋಂಕಿನ ತೀವ್ರತೆ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ. ಈಗಾಗಲೇ ರಾಜ್ಯದಲ್ಲಿ ಕೋಟ್ಯಂತರ ಜನರು ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ.
ಕೋವಿಡ್ ಲಸಿಕೆಯನ್ನ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ, ರಾಜ್ಯದಲ್ಲಿ ಕಳೆದ ವರ್ಷ ಜನವರಿ 16ರಿಂದ ಹಂತ ಹಂತವಾಗಿ ಆರಂಭಿಸಲಾಯಿತು. ಅಂದಿನಿಂದ ಈ ತನಕ ಸುಮಾರು 10,23,45,189 ಡೋಸ್ಗಳನ್ನು ನೀಡಲಾಗಿದೆ. ಮೊದ ಮೊದಲು ಕೊರೊನಾ ವಾರಿಯರ್ಸ್, ಫ್ರಂಟ್ ಲೈನ್ ವರ್ಕರ್ಸ್ ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಈ ಲಸಿಕೆ ನೀಡಲಾಗಿತ್ತು. ಇದಾದ ಬಳಿಕ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಆರಂಭಿಸಿದ ನಂತರ ಮಾರ್ಚ್ 16ರಿಂದ 12-14 ವರ್ಷದೊಳಗಿನ ಮಕ್ಕಳಿಗೂ ಲಸಿಕೆಯನ್ನು ಹಾಕಲಾಗುತ್ತಿದೆ.
ಈಗ ಮಕ್ಕಳಿಗೆ ಲಸಿಕೆ ಹಾಕುವ ಪ್ರಕ್ರಿಯೆ ಆರಂಭವಾಗಿ ಮೂರು ದಿನ ಕಳೆದರೂ ಹೇಳಿಕೊಳ್ಳುವಷ್ಟು ಲಸಿಕೆ ಹಾಕಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ 12-14 ವರ್ಷದ ಸುಮಾರು 20 ಲಕ್ಷದ 25 ಸಾವಿರ ಮಕ್ಕಳು ಇದ್ದು, ಶುಕ್ರವಾರ 7:30ರ ತನಕ 68,321 ಮಕ್ಕಳು ಮಾತ್ರ ಲಸಿಕೆ ಪಡೆದಿದ್ದಾರೆ. ಅಂಕಿ - ಅಂಶಗಳನ್ನ ಗಮನಿಸಿದರೆ ಮಕ್ಕಳಿಗೆ ಲಸಿಕೆ ಹಾಕಿಸಲು ಪೋಷಕರು ಹಿಂದೇಟು ಹಾಕುತ್ತಿದ್ದರೇನೋ ಎಂಬಂತೆ ಭಾಸವಾಗುತ್ತಿದೆ.
ಶುಕ್ರವಾರದ ಅಂಕಿ- ಅಂಶಗಳನ್ನು ಗಮನಿಸಿದರೆ ಪ್ರಮುಖವಾಗಿ ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಬೀದರ್ ಹಾಗೂ ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಕಡೆಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಲಸಿಕೆ ವಿತರಿಸಲಾಗಿದೆ. ಮಾರ್ಚ್ 18ರ ಅಂಕಿ ಅಂಶಗಳಂತೆ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಪ್ರಮಾಣದಲ್ಲಿ 12ರಿಂದ 14ವರ್ಷದೊಳಗಿನ ಮಕ್ಕಳಿಗೆ ಲಸಿಕೆಯಾಗಿದೆ ಎಂಬ ವಿವರ ಇಲ್ಲಿದೆ.
ಲಸಿಕೆ ವಿತರಣೆಯಲ್ಲಿ ಕಳಪೆ ಸಾಧನೆ ತೋರಿದ ಜಿಲ್ಲೆಗಳು..
# | ಜಿಲ್ಲೆಯ ಹೆಸರು | ಲಸಿಕೆಯ ಗುರಿ | ಲಸಿಕೆ ಹಾಕಿಸಿಕೊಂಡವರು |
1 | ಬಾಗಲಕೋಟೆ | 66,812 | 58 |
2 | ಬೆಂಗಳೂರು (ಗ್ರಾ) | 31,009 | 73 |
3 | ಬೆಳಗಾಂ | 61,258 | 39 |
4 | ಬೀದರ್ | 67,216 | 21 |
5 | ಚಿಕ್ಕಬಳ್ಳಾಪುರ | 41,860 | 73 |
6 | ದಾವಣಗೆರೆ | 51,391 | 47 |
7 | ಧಾರವಾಡ | 60,020 | 20 |
8 | ಹಾವೇರಿ | 53,330 | 23 |
9 | ಮಂಡ್ಯ | 48,725 | 39 |
10 | ಶಿವಮೊಗ್ಗ | 53,160 | 40 |
ಲಸಿಕೆ ವಿತರಣೆಯಲ್ಲಿ ಸಾಧಾರಣ ಸಾಧನೆ ತೋರಿದ ಜಿಲ್ಲೆಗಳು..
# | ಜಿಲ್ಲೆಯ ಹೆಸರು | ಲಸಿಕೆಯ ಗುರಿ | ಲಸಿಕೆ ಹಾಕಿಸಿಕೊಂಡವರು |
1 | ಬೆಂಗಳೂರು ನಗರ | 38,186 | 586 |
2 | ಚಿಕ್ಕಮಗಳೂರು | 32,125 | 401 |
3 | ಗದಗ | 33,585 | 909 |
4 | ಹಾಸನ | 48,819 | 415 |
5 | ಕೊಡಗು | 16,284 | 723 |
6 | ಕೊಪ್ಪಳ | 53,352 | 419 |
7 | ರಾಯಚೂರು | 74,458 | 483 |
8 | ಯಾದಗಿರಿ | 52,186 | 172 |
ಈ ಜಿಲ್ಲೆಗಳನ್ನು ಹೊರತುಪಡಿಸಿದಂತೆ ವಿಜಯಪುರ, ಉತ್ತರ ಕನ್ನಡ, ಉಡುಪಿ, ತುಮಕೂರು, ರಾಮನಗರ, ಮೈಸೂರು, ಕೋಲಾರ, ಕಲಬುರಗಿ, ದಕ್ಷಿಣ ಕನ್ನಡ. ಚಿತ್ರದುರ್ಗ, ಚಾಮರಾಜನಗರ, ಬಳ್ಳಾರಿಯಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ಉತ್ತಮವಾಗಿ ನಡಿತಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಅತೀ ಹೆಚ್ಚು ಮಕ್ಕಳಿಗೆ ಲಸಿಕೆ ನೀಡಲಾಗಿದ್ದು, 53,342 ಮಕ್ಕಳ ಪೈಕಿ 11,708 ಮಕ್ಕಳು ಲಸಿಕೆ ಪಡೆದಿದ್ದಾರೆ. ಎರಡನೇ ಸ್ಥಾನದಲ್ಲಿ ಬಳ್ಳಾರಿ, ಕೋಲಾರ, ಚಾಮರಾಜನಗರ ಜಿಲ್ಲೆಗಳು ಇದ್ದು, ಈ ಜಿಲ್ಲೆಗಳಲ್ಲಿ ಸುಮಾರು 7 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಲಸಿಕೆ ಕೊಡಲಾಗಿದೆ.