ಬೆಂಗಳೂರು : ಸಭಾಂಗಣದ ಒಳಗೆ ಹೋಗುವವರು ಕಡ್ಡಾಯವಾಗಿ ಕೋವಿಡ್ ಟೆಸ್ಟ್ ರಿಪೋರ್ಟ್ ತೋರಿಸಲೇಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪಷ್ಟಪಡಿಸಿದರು.
ಅಧಿವೇಶನ ಪ್ರಾರಂಭವಾಗುತ್ತಿರುವ ಹಿನ್ನೆಲೆ, ವಿಧಾನಸೌಧದಲ್ಲಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಸೋಮವಾರ ಅಧಿವೇಶನ ಪ್ರಾರಂಭವಾಗುತ್ತಿದೆ. ಈ ಬಾರಿ ವಿಶಿಷ್ಠ ರೀತಿಯಲ್ಲಿ ಅಧಿವೇಶನ ನಡೆಸುವ ವ್ಯವಸ್ಥೆ ನಿರ್ಮಾಣವಾಗಿದೆ. ಕೊರೊನಾ ಹಿನ್ನೆಲೆ ಹಲವಾರು ದುಷ್ಪರಿಣಾಮಗಳು ನಮ್ಮ ಗಮನಕ್ಕೆ ಬಂದಿವೆ. ಕೊರೊನಾ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಕ್ರಮ ಕೈಕೊಂಡಿದ್ದೇವೆ. ಅಧಿವೇಶನಕ್ಕೆ ಬರುವವರು ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿ ತರಬೇಕು ಎಂದರು.
ಅಧಿವೇಶನ ಮುಗಿಯುವವರೆಗೂ ವಿಧಾನಸೌಧದಲ್ಲಿ ಕೋವಿಡ್ ಟೆಸ್ಟ್ ಮಾಡಿಸುತ್ತೇವೆ. ಕಾನೂನು ಸಂಸದೀಯ ಸಚಿವರ ಜೊತೆಗೆ ಚರ್ಚೆ ಮಾಡಿದ್ದೇವೆ. ಹಾಗೆಯೇ ಸಿಎಂ ಜೊತೆಗೆ ಕೂಡ ಚರ್ಚೆ ಮಾಡಿದ್ದೇನೆ. ಮೊದಲೇ ಕಾರ್ಯ-ಕಲಾಪಗಳನ್ನು ಹೇಗೆ ನಡೆಸಬೇಕು ಎಂದು ಸಮಾಲೋಚನೆ ಮಾಡುತ್ತೇವೆ ಎಂದರು. ಸಭಾಂಗಣದೊಳಗೆ ಹೋಗುವಾಗ ಕೊರೊನಾ ನೆಗೆಟಿವ್ ರಿಪೋರ್ಟ್ ತೋರಿಸಬೇಕು.
ಎರಡನೇ ಮಹಡಿ, ಮೊದಲೇ ಮಹಡಿಯಲ್ಲಿ ರಿಪೋರ್ಟ್ ತೋರಿಸಬೇಕು. ಅಧಿಕಾರಿಗಳು, ಶಾಸಕರು, ಸಚಿವರು, ಪತ್ರಕರ್ತ ಮಿತ್ರರು ಎಲ್ಲರೂ ರಿಪೋರ್ಟ್ ತರುವುದು ಕಡ್ಡಾಯ. ಯಾರು ನಿರ್ಲಕ್ಷ್ಯ ಮಾಡುವಂತಿಲ್ಲ. ಇಲ್ಲದಿದ್ದರೆ ಇಲ್ಲೇ ಟೆಸ್ಟ್ ಮಾಡಿಸಿ ರಿಪೋರ್ಟ್ ತೋರಿಸಿ ಒಳಗೆ ಬರಬೇಕು ಎಂದರು. ಈ ಬಾರಿ ವಿಧಾನಸೌಧದಲ್ಲಿ ಜನಸಾಮಾನ್ಯರು ಮಂತ್ರಿಗಳ ಭೇಟಿಗೆ ಅವಕಾಶವಿಲ್ಲ. ಸಚಿವರ ಕೊಠಡಿಯಲ್ಲಿ ಬೇಕಾದರೆ ಭೇಟಿ ಮಾಡಬಹುದು ಎಂದರು.
ಕೊರೊನಾ ಟೆಸ್ಟ್ ಮಾಡಿಸಿಕೊಂಡ ಸಿದ್ದರಾಮಯ್ಯ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಏರ್ಪಡಿಸಲಾಗಿರುವ ಟೆಸ್ಟಿಂಗ್ ಕೇಂದ್ರಕ್ಕೆ ಹೋಗಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡರು.