ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಶಾಸಕ ಪರಣ್ಣ ಮುನವಳ್ಳಿ ಅವರು ಅಪೌಷ್ಟಿಕ ಮಕ್ಕಳಿಗೆಂದೇ ರೂಪಿಸದ ಯೊಜನೆಯಿಂದ ಹಣ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಶುಕ್ರವಾರ ರಾತ್ರಿ ರೇಸ್ ಕೋರ್ಸ್ ರಸ್ತೆಯ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಯಿತು.
ವಿಕಾಸಸೌಧದಲ್ಲಿ ಕಿಕ್‌ಬ್ಯಾಕ್ ಕೊಟ್ಟರೆ ಟೆಂಡರ್ ಗೋಲ್‌ಮಾಲ್ ಮಾಡಲು ರೆಡಿ, ನಿಮಗೇ ಟೆಂಡರ್ ಮಾಡಿಸಿಕೊಡ್ತೀನಿ ಎಂದು ಬಿಜೆಪಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಭರವಸೆ ನೀಡಿದ್ದರು. ಸಚಿವೆಯ ಅಕ್ರಮಕ್ಕೆ ಕೊಪ್ಪಳ ಜಿಲ್ಲೆಯ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಸಹ ಸಾಥ್ ನೀಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಈ ಮೊದಲು ಅಂಗನವಾಡಿಯಿಂದಲೇ ನೇರವಾಗಿ ಮೊಟ್ಟೆ ಖರೀದಿಸಿ, ಮಕ್ಕಳು ಮತ್ತು ಗರ್ಭಿಣಿಯರಿಗೆ ನೀಡಲಾಗುತ್ತಿತ್ತು. ಆದರೆ ನಿರ್ಗತಿಕರಿಗೆ ನೀಡುವ ಯೋಜನೆಯಲ್ಲಿ ಹಣ ಮಾಡುವ ದುರುದ್ದೇಶದಿಂದ ಸಚಿವೆ ಶಶಿಕಲಾ ಜೊಲ್ಲೆ ಟೆಂಡರ್ ಮೂಲಕ ಮೊಟ್ಟೆ ಖರೀದಿ ಪ್ರಕ್ರಿಯೆಗೆ ಮುಂದಾಗಿದ್ದಾರೆ. ಬಡವರ, ಅಪೌಷ್ಟಿಕ ಮಕ್ಕಳ ಯೋಜನೆಯಲ್ಲಿ ಅಕ್ರಮಕ್ಕೆ ಮುಂದಾಗಿ ಕಮಿಷನ್ ಪಡೆಯುತ್ತಿದ್ದಾರೆ. ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಮಾತನಾಡಿದ ಕಾಂಗ್ರೆಸ್ ಮುಖಂಡ ಎಸ್ ಮನೋಹರ್, ಗರ್ಭಿಣಿಯರಿಗೆ, ಅಪೌಷ್ಟಿಕ ಮಕ್ಕಳಿಗೆ ನೀಡಲಾಗುವ ‘ಮಾತೃಪೂರ್ಣ’ ಯೋಜನೆಯಡಿ ಮೊಟ್ಟೆ ವಿತರಿಸಲು ಟೆಂಡರ್ ಪ್ರಕ್ರಿಯೆಗೆ ಇಲಾಖೆ ಮುಂದಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಟೆಂಡರ್ ಕರೆಯಲು ಸರ್ಕಾರ ಮುಂದಾಗಿತ್ತು. ಆದರೆ ಕೆಲವರ ಜೊತೆ ಕಿಕ್ಬ್ಯಾಕ್ಗೆ ಬೇಡಿಕೆ ಇಟ್ಟು ಸಚಿವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಆ ವೇಳೆ ಶಾಸಕರ ಕೊಠಡಿಗೆ ಆಗಮಿಸಿದ ಸಚಿವರು ಕೂಡ, ತಮಗೇ ಟೆಂಡರ್ ಸಿಗುವಂತೆ ಮಾಡುವುದಾಗಿ ಅಸಾಮಿಗಳಿಗೆ ಹೇಳಿರುವ ದೃಶ್ಯಾವಳಿಗಳು ದೊರೆತಿವೆ ಎಂದು ಆರೋಪಿಸಿದರು.
ಕೆಲ ಅಸಾಮಿಗಳಿಗೆ ಹಣಕಾಸು ವ್ಯವಹಾರದ ಕುರಿತು ಸಂಜಯ್ ಎನ್ನುವವರೊಂದಿಗೆ ಮಾತನಾಡಲು ಸಚಿವರು ಸೂಚನೆ ಕೊಟ್ಟಿದ್ದರು. ಎಂಎಲ್‌ಎ ಪರಣ್ಣ ಮುನವಳ್ಳಿಯವರು ಹೇಳಿದಂತೆ ಹಣ ತಲುಪಿಸಲು ಕೆಲ ವ್ಯಕ್ತಿಗಳು ಸಜ್ಜಾಗಿದ್ದರು. ಈ ವೇಳೆ ಸಚಿವರು ಹಣ ಪಡೆದುಕೊಳ್ಳಲು ಸೂಚಿಸಿದ್ದಾರೆ ಎಂದ ಸಂಜಯ್, 25 ಲಕ್ಷ ಹಣ ಪಡೆದುಕೊಂಡಿರುವುದು ಖಾಸಗಿ ಸುದ್ದಿ ವಾಹಿನಿಯ ಸ್ಟಿಂಗ್ ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿದೆ ಎಂದರು.