ಬೆಂಗಳೂರು: ಕೊಡವ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್ಟಿ) ಸ್ಥಾನಮಾನ ನೀಡುವ ಹಿನ್ನೆಲೆಯಲ್ಲಿ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಸಲ್ಲಿಸಿರುವ ಅಧ್ಯಯನ ವರದಿಯನ್ನು ಅಂಗೀಕರಿಸುವ ಮುನ್ನ ಅಧ್ಯಯನವನ್ನು ಸೂಕ್ತ ಮಾನದಂಡಗಳ ಅಡಿ ನಡೆಸಲಾಗಿದೆಯೇ ಎಂಬ ಬಗ್ಗೆ ಪರಿಶೀಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮತ್ತು ನಿರ್ದೇಶಕರು ಅಧ್ಯಯನ ನಡೆಸಿದ ವೇಳೆ ಅನುಸರಿಸಿರುವ ಕ್ರಮ ಪ್ರಶ್ನಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ಪೀಠ, ಕೊಡವ ಸಮುದಾಯಕ್ಕೆ ಬುಡಕಟ್ಟು ಜನಾಂಗದ ಸ್ಥಾನಮಾನ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಈಗಾಗಲೇ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಸರ್ಕಾರ ವರದಿಯನ್ನು ಪರಿಶೀಲನೆಗೆ ಇಟ್ಟಿದೆ. ಆದರೆ, ಇದೇ ವೇಳೆ ಅರ್ಜಿದಾರರು ಅಧ್ಯಯನವನ್ನು ಸೂಕ್ತ ಮಾನದಂಡ ಅನುಸರಿಸಿ ನಡೆಸಿಲ್ಲ ಎಂದು ಆಕ್ಷೇಪಿಸಿದ್ದಾರೆ. ಹೀಗಾಗಿ, ಸರ್ಕಾರ ಕೇವಲ ವರದಿ ಆಧರಿಸಿ ನಿರ್ಣಯ ಕೈಗೊಳ್ಳಬಾರದು. ಬದಲಿಗೆ, 2016ರ ಡಿಸೆಂಬರ್ 1ರಂದು ಹೊರಡಿಸಿದ್ದ ಆದೇಶದಲ್ಲಿ ವಿಧಿಸಿದ್ದ ಷರತ್ತು ಮತ್ತು ಉದ್ದೇಶಗಳಿಗೆ ಅನುಗುಣವಾಗಿ ಅಧ್ಯಯನ ನಡೆಸಿದ್ದಾರೆಯೇ ಎಂಬುದನ್ನು ಸರ್ಕಾರ ಪರಿಶೀಲಿಸಬೇಕು. ಒಂದೊಮ್ಮೆ ಸೂಕ್ತ ಮಾನದಂಡ ಅನುಸರಿಸಿ ಅಧ್ಯಯನ ನಡೆಸಿಲ್ಲವೆಂದಾರೆ, ಹೊಸ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಸಂಶೋಧನಾ ಸಂಸ್ಥೆಗೆ ಆದೇಶಿಸಲು ಸರ್ಕಾರ ಮುಕ್ತವಾಗಿದೆ ಎಂದು ತಿಳಿಸಿ, ಅರ್ಜಿ ಇತ್ಯರ್ಥಪಡಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎ.ಎಸ್ ಪೊನ್ನಣ್ಣ ವಾದಿಸಿ, ಅಧ್ಯಯನದ ವೇಳೆ ಸೂಕ್ತ ಮಾನದಂಡ ಅನುಸರಿಸಿಲ್ಲ. ಐದು ಅಂಶಗಳ ಆಧಾರದ ಮೇಲೆ ಅಧ್ಯಯನ ನಡೆಸಲು ಸರ್ಕಾರ ಆದೇಶಿತ್ತು. ಆದರೆ, ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ಅಧ್ಯಯನ ನಡೆದಿದೆ. ಅಧ್ಯಯನ ವೇಳೆ ಸಿದ್ಧಪಡಿಸಿದ್ದ ಪ್ರಶ್ನಾವಳಿ ಕೂಡ ಸಮಂಜಸವಾಗಿರಲಿಲ್ಲ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಮಾನದಂಡದ ಮೇಲೆ ಅಧ್ಯಯನ ನಡೆಸಲಾಗಿದೆ. ಆದರೆ, ಜನಾಂಗೀಯ ಅಧ್ಯಯನ ನಡೆಸಬೇಕಿತ್ತು. ಹೀಗಾಗಿ, ಸಂಶೋಧನಾ ಸಂಸ್ಥೆ ಸಲ್ಲಿಸಿರುವ ವರದಿ ಪರಿಗಣಿಸದಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು. ವಾದ ಪರಿಗಣಿಸದ ಪೀಠ, ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಿರುವುದರಿಂದ, ವರದಿ ಪರಿಶೀಲನೆ ವೇಳೆ ಆಕ್ಷೇಪಣೆಗಳನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಸೂಚಿಸಿತು.