ಬೆಂಗಳೂರು : ಹಿಜಾಬ್ ಸಂಘರ್ಷದ ನಡುವೆಯೇ ಶಿವಮೊಗ್ಗದಲ್ಲಿ ಹಿಂದು ಯುವಕನ ಕೊಲೆ ಮಾಡಲಾಗಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ 18 ಕೊಲೆ ಆಗಿತ್ತು ಅಂತಾ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆರೋಪಿಸಿದ್ದಾರೆ. ಈಗ ಮತ್ತೆ ಭಯೋತ್ಪಾದಕರ ಚಟುವಟಿಕೆ ಆರಂಭವಾಗಿದೆ. ಇದರ ಬೇರನ್ನು ಪತ್ತೆ ಹಚ್ಚಿ ತುಂಡರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಳಿಕ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ಶಿವಮೊಗ್ಗದಲ್ಲಿ ನಡೆದಿರುವ ಹಿಂದೂ ಕಾರ್ಯಕರ್ತನ ಕೊಲೆಯನ್ನು ಖಂಡಿಸುತ್ತೇನೆ.
ಕೊಲೆಗೆ ಯಾರು ಕಾರಣ ಅಂತಾ ಶೀಘ್ರ ಪತ್ತೆ ಮಾಡಲಾಗುತ್ತೆ. ಸತ್ಯಾಂಶ ಹೊರಗೆ ಬಂದ ಮೇಲೆ ಕಾರಣ ಏನು? ಯಾರು ಅಂತಾ ಗೊತ್ತಾಗುತ್ತದೆ. ಕೊಲೆ ಹಿಂದೆ ಯಾರ ಕೈವಾಡ ಇದೆ ಅಂತಾ ಮೊದಲು ಪತ್ತೆ ಹಚ್ಚಬೇಕಿದೆ ಎಂದರು.
ಮುಸಲ್ಮಾನ ಗೂಂಡಾಗಳಿಂದ ಕೊಲೆ ಆಗಿದೆ ಎಂಬ ಸಚಿವ ಈಶ್ವರಪ್ಪ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈಶ್ವರಪ್ಪ ಅದೇ ಜಿಲ್ಲೆಯವರು. ಕೊಲೆ ಬಗ್ಗೆ ಅವರಿಗೆ ಹೆಚ್ಚಿನ ಮಾಹಿತಿ ಇರುತ್ತದೆ. ಈ ಹಿನ್ನೆಲೆಯಲ್ಲಿ ಅವರು ಈ ರೀತಿಯ ಹೇಳಿಕೆ ಕೊಟ್ಟಿರಬಹುದು ಎಂದರು.
ಇಸ್ಲಾಂ ವಿರುದ್ಧದ ಪೋಸ್ಟ್ನಿಂದಾಗಿ ಕೊಲೆ : ಇಸ್ಲಾಂ ಹುಟ್ಟಿದಾಗಿನಿಂದಲೂ ಅಸಹಿಷ್ಣುತೆ ಇದೆ. ಸಹಿಷ್ಣುತೆಗೂ ಇಸ್ಲಾಂಗೂ ಸಂಬಂಧ ಇಲ್ಲ. ಇಸ್ಲಾಂಗೆ ಇನ್ನೊಂದನ್ನು ಒಪ್ಪುವ, ಸಹಿಸಿಕೊಳ್ಳುವ ಮಾನಸಿಕತೆ ಇಲ್ಲ. ಕೆಲವೊಮ್ಮೆ ಇಸ್ಲಾಂ ಉಗ್ರರೂಪ ತಾಳುತ್ತದೆ.
ಕೆಲವೊಮ್ಮೆ ನ್ಯೂಟ್ರಲ್ ಆಗಿರುತ್ತದೆ. ಅಲ್ಲಿ ವಿಶ್ಲೇಷಣೆಗೆ ಅವಕಾಶ ಇಲ್ಲ. ಇಸ್ಲಾಂ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಹರ್ಷ ಪೋಸ್ಟ್ ಹಾಕ್ತಿದ್ದ ಅನ್ನೋ ಕಾರಣಕ್ಕೆ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿರುವ ಮಾಜಿ ಡಿಸಿಎಂ, ಸತ್ಯಾಸತ್ಯತೆ ಹೊರಗೆ ಬರಲಿ ಎಂದು ಹೇಳಿದರು.
ನಳಿನ್ಕುಮಾರ್ ಕಟೀಲ್ ಖಂಡನೆ : ಶಿವಮೊಗ್ಗದ ಕೊಲೆ ಪ್ರಕರಣವನ್ನು ಟ್ವೀಟ್ ಮಾಡುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಖಂಡಿಸಿದ್ದಾರೆ. ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷ ಅವರನ್ನು ದುಷ್ಕರ್ಮಿಗಳು ಹತ್ಯೆಗೈದಿರುವುದು ಖಂಡನೀಯ.
ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಲ್ಲಿ ಮನವಿ ಮಾಡುತ್ತೇನೆ. ಹಿಜಾಬ್ ವಿವಾದದ ನಡುವೆ ಇಂತಹ ಕೃತ್ಯಗಳ ಮೂಲಕ ಸಮಾಜದಲ್ಲಿ ಶಾಂತಿ ಕದಡಲು ಯತ್ನ ನಡೆಯುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
ಓದಿ: 'ಮುಸಲ್ಮಾನ ಗೂಂಡಾಗಳು ಶಿವಮೊಗ್ಗದ ಯುವಕನ ಕೊಲೆ ಮಾಡಿದ್ದಾರೆ': ಸಚಿವ ಕೆ.ಎಸ್.ಈಶ್ವರಪ್ಪ