ಕೆ.ಆರ್.ಪುರ(ಬೆಂಗಳೂರು): ಸಿಲಿಂಡರ್ ಬೆಲೆ ಗಗನಕ್ಕೇರಿದೆ. ಮತ್ತೊಂದೆಡೆ ಸಿಲಿಂಡರ್ ಸ್ಫೋಟ ಪ್ರಕರಣಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಈ ಎಲ್ಲ ತಾಪತ್ರಯದಿಂದ ದೂರ ಇರಲು ಬೆಂಗಳೂರು ನಗರವಾಸಿಗಳು ದೇಶಿಯ ಸೇವೆಯಾದ ಕೊಳವೆ ನೈಸರ್ಗಿಕ ಅನಿಲ(ಪಿಎನ್ಜಿ ಗ್ಯಾಸ್) ಮೊರೆ ಹೋಗುತ್ತಿದ್ದಾರೆ.
ಬೆಂಗಳೂರಿನ ಕೆ.ಆರ್. ಪುರ ಕ್ಷೇತ್ರದ ಹೊರಮಾವು ವಾರ್ಡ್‌ನ ಟ್ರಿನಿಟಿ ಎಂಕ್ಲೇವ್ ಮತ್ತು ಬ್ಯಾಂಕ್ ಅವೆನ್ಯೂ ಬಡಾವಣೆಗಳ ಜನರು ತಮ್ಮ ಮನೆಗಳಿಗೆ ಪೈಪ್ಡ್ ನ್ಯಾಚುರಲ್ ಗ್ಯಾಸ್ ಅಳವಡಿಸಿಕೊಂಡು ಗ್ಯಾಸ್ ದರದ ಮೇಲಿನ ವೆಚ್ಚದಲ್ಲಿ ಸುಮಾರು ಶೇ.40 ರಷ್ಟು ಹೊರೆಯನ್ನ ಕಡಿಮೆ ಮಾಡಿಕೊಂಡಿದ್ದಾರೆ.
ಕೆ.ಆರ್.ಪುರ ಭಾಗದಲ್ಲಿ ಮೊದಲ ಬಾರಿಗೆ 2 ವರ್ಷಗಳ ಹಿಂದೆ ಹೊರಮಾವು ವಾರ್ಡ್‌ನ ಟ್ರಿನಿಟಿ ಎನಕ್ಲೇವ್ ಮತ್ತು ಬ್ಯಾಂಕ್ ಅವೆನ್ಯೂ ಬಡಾವಣೆಗಳಿಗೆ ಅಡುಗೆ ಅನಿಲ ಪೈಪ್‌ಲೈನ್ ಮಾಡಲಾಗಿತ್ತು. ಸುಮಾರು 250 ಹೆಚ್ಚು ಮನೆಯವರು ಕಳೆದ ತಿಂಗಳ ಡಿಸೆಂಬರ್ನಿಂದ ಬಳಕೆ ಮಾಡುತ್ತಿದ್ದಾರೆ. 400 ಕ್ಕೂ ಹೆಚ್ಚು ಮನೆಗಳಿಗೆ ಪೈಪ್‌ಲೈನ್ ಮಾಡಿದ್ದು, ಅದರಲ್ಲಿ ಪ್ರಸ್ತುತ 100 ಮನೆಯವರು ಉಪಯೋಗಿಸುತ್ತಿದ್ದಾರೆ.
1 ವರ್ಷದಲ್ಲಿ 1 ಲಕ್ಷ 20 ಸಾವಿರ ಮನೆಗೆ ಸಂಪರ್ಕ ಗುರಿ
ಬೆಂಗಳೂರಿನಲ್ಲಿ ಗೇಲ್ ಗ್ಯಾಸ್ ಕಂಪನಿ ಸುಮಾರು 37 ಸಾವಿರ ಮನೆಗಳಿಗೆ ನೈಸರ್ಗಿಕ ಅನಿಲ ಪೂರೈಕೆ ಮಾಡುತ್ತಿದ್ದು, ಇನ್ನೂ 1 ವರ್ಷ ವರ್ಷದಲ್ಲಿ 1 ಲಕ್ಷ 20 ಸಾವಿರ ಮನೆಗಳಿಗೆ ಅನಿಲ ಪೂರೈಕೆ ಮಾಡುವ ಯೋಜನೆಯನ್ನು ಇಟ್ಟುಕೊಂಡಿದೆ. ಮುಂದೆ ವಿಜ್ಞಾನ ನಗರ ಮತ್ತು ರಾಮಮೂರ್ತಿ ನಗರಕ್ಕೆ ಸಂಪರ್ಕ ಸಿಗಲಿದ್ದು, ಇಲ್ಲಿ ಸುಮಾರು 48 ಕಿ.ಮೀ ಉದ್ದದ ಗ್ಯಾಸ್ ಪೈಪ್‌ಲೈನ್ ಅಳವಡಿಸಲಾಗುವುದು ಎಂದು ಗೇಲ್ ಗ್ಯಾಸ್ ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಓದಿ: ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಇಂದೂ ಇಳಿಕೆ... ಸಾವಿನ ಸಂಖ್ಯೆಯಲ್ಲಿ ಭಾರಿ ಏರಿಕೆ,1733 ಮಂದಿ ಬಲಿ
ಪಿಎನ್ಜಿ ಬಳಕೆಯಿಂದ ಖುಷಿಯಾಗಿರುವ ಟ್ರಿನಿಟಿ ಎಂಕ್ಲೇವ್ ಬಡಾವಣೆ ಅಸೋಸಿಯೇಷನ್ ಅಧ್ಯಕ್ಷ ಕೊಚ್ಚು ಶಂಕರ್ ಅವರು ಮಾತನಾಡಿ, ನಾನು ಗ್ಯಾಸ್ ಸಿಲಿಂಡರ್‌ಗಾಗಿ ತಿಂಗಳಿಗೆ 1 ಸಾವಿರ ರೂಪಾಯಿ ವೆಚ್ಚ ಮಾಡುತ್ತಿದ್ದೆ. ಪಿಎನ್ಜಿ ಬಳಕೆಯಿಂದ ಗ್ಯಾಸ್ ವೆಚ್ಚ 600 ರೂಪಾಯಿಗೆ ಇಳಿದಿದೆ. ನಾವು ಈಗ ಕೂಲಿಂಗ್‌ಗಾಗಿ ಪಿಎನ್ಜಿ( PNG) ಅನ್ನು ಬಳಸಲು ಪ್ರಾರಂಭಿಸಿದ್ದೇವೆ. ಅಡುಗೆಗೂ ಉತ್ತಮವಾಗಿದೆ ಮತ್ತು ಅದರ ಸುರಕ್ಷತೆಯೂ ಉತ್ತಮವಾಗಿದೆ. ಸಿಲಿಂಡರ್ ಸ್ಫೋಟವಾಗುವ ಭೀತಿಯಿಲ್ಲ. ಗೃಹಿಣಿಯರಿಗೆ ತುಂಬಾ ಆರಾಮದಾಯಕವಾಗಿದೆ ಎಂದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ