ಬೆಂಗಳೂರು: ಎಸಿಬಿ ದಾಳಿ ಹೆಸರಿನಲ್ಲಿ ಅಪರಿಚಿತರು ಸರ್ಕಾರಿ ಅಧಿಕಾರಿಗೆ ಬೆದರಿಸಿ ಹಣ ವಸೂಲಿಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಮಾ.9ರಂದು ಬೆಂಗಳೂರು ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಹೆಚ್.ಡಿ ರಾಜೀವ್ ಅವರಿಗೆ ಎಸಿಬಿ ಡಿವೈಎಸ್ಪಿ ರವಿಶಂಕರ್ ಹೆಸರಿನಲ್ಲಿ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ ಸಮುದಾಯ ಭವನ, ಅಂಗನವಾಡಿ ಕಟ್ಟಡಗಳ ನಿರ್ಮಾಣದಲ್ಲಿ ನಿಮ್ಮ ಅವಧಿಯಲ್ಲಿ ಹಣ ದುರುಪಯೋಗವಾಗಿದೆ ಎಂದು ನಿಮ್ಮ ವಿರುದ್ಧ ಸಾಕಷ್ಟು ದೂರುಗಳು ಬಂದಿವೆ.
ಆದ್ದರಿಂದ ನಿಮ್ಮನ್ನ ಬಂಧಿಸಲು ಎಡಿಜಿಪಿಯವರ ಆದೇಶವಿದೆ. ನೀವು ಒಳ್ಳೆಯವರೆಂದು ನಿಮಗೆ ಮೊದಲೇ ಮಾಹಿತಿ ನೀಡುತ್ತಿದ್ದು, ಈ ದಿನ ರಜೆ ಪಡೆದುಕೊಳ್ಳಿ ಎಂದಿದ್ದಾನೆ. ವಂಚನೆ ಕರೆ ಎಂದು ನಿರ್ಲಕ್ಷಿಸಿದ್ದ ರಾಜೀವ್ ಅವರಿಗೆ ಅದೇ ದಿನ ಸಂಜೆ ಕರೆ ಮಾಡಿದ್ದ ಅದೇ ಅಪರಿಚಿತ ವ್ಯಕ್ತಿ ಎಸಿಬಿ ಅಧಿಕಾರಿಗಳ ಶ್ರೀಲಂಕಾ ಪ್ರವಾಸದ ಟಿಕೆಟ್ಗೆ 1.72 ಲಕ್ಷ ರೂ. ಗೂಗಲ್ ಪೇ ಮೂಲಕ ನೀಡುವಂತೆ 2 ಬೇರೆ ಬೇರೆ ನಂಬರ್ ನೀಡಿದ್ದಾನೆ.
ಅಲ್ಲದೇ ಹಣ ನೀಡದಿದ್ದರೆ, ನಿಮ್ಮ ಮನೆ, ಕಚೇರಿಗಳ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಧಿಕಾರಿಗಳ ಹೆಸರಿನಲ್ಲಿ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿರುವ ರಾಜೀವ್ ಹಲಸೂರು ಗೇಟ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮೂವರು ಹೆಂಡ್ತಿಯರ ಗಂಡನ ಕೊಲೆ ಪ್ರಕರಣ: ಪತಿಯ ಹತ್ಯೆಗೆ 10 ಲಕ್ಷ ಸುಪಾರಿ ಕೊಟ್ಟಿದ್ದು ಎರಡನೇ ಪತ್ನಿ!