ಬೆಂಗಳೂರು: ವೈದ್ಯಕೀಯ ಪರಿಕರಗಳ ಖರೀದಿ ಅವ್ಯವಹಾರ ಆರೋಪಕ್ಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತೀವ್ರ ಅಸಮಧಾನಗೊಂಡಿದ್ದು ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗ್ತಿದೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಟಿ ನಡೆಸಿ ದಾಖಲೆ ಬಿಡುಗಡೆ ಮಾಡಿದ ಬೆನ್ನಲ್ಲೇ ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಡಿಸಿಎಂ ಅಶ್ವತ್ಥ್ ನಾರಾಯಣ ವಿರುದ್ಧ ಸಿಎಂ ಗರಂ ಆಗಿದ್ದಾರೆ. ವಿಧಾನಸೌಧದಲ್ಲಿನ ತಮ್ಮ ಕಚೇರಿಗೆ ಸಚಿವರನ್ನು ಕರೆಸಿಕೊಂಡು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೊದಲೇ ಪೂರ್ಣ ಲೆಕ್ಕದ ಮಾಹಿತಿ ಸಂಗ್ರಹಿಸಿ ಅಂತ ಹೇಳಿದ್ದೆ. ಆಗ ನೀವೆಲ್ಲ ಏನು ಮಾಡುತ್ತಿದ್ದೀರಿ, ಇಷ್ಟು ದಿನ ಆರೋಪ ಮಾಡಿದ್ದರು ಆಗಲೇ ನೀವು ಸರಿಯಾದ ಮಾಹಿತಿ ಒದಗಿಸಬೇಕಿತ್ತಲ್ಲವೇ, ನಿಮ್ಮ ನಿರ್ಲಕ್ಷ್ಯದಿಂದ ಈಗ ಪ್ರತಿಪಕ್ಷಕ್ಕೆ ನಾವು ಆಹಾರ ಆಗಬೇಕಾಯಿತು ಎಂದು ಕಿಡಿಕಾರಿದ್ದಾರೆ.
ಕೊರೊನಾದಂತಹ ಕ್ಲಿಷ್ಟಕರ ಸನ್ನಿವೇಶವನ್ನು ಎದುರಿಸುತ್ತಿರುವ ಇಂತಹ ಸಂದರ್ಭದಲ್ಲಿ ಅಪವಾದಗಳು ಸರ್ಕಾರವನ್ನು ಮುಜುಗರಕ್ಕೀಡಾಗುವಂತೆ ಮಾಡಿದೆ. ಕೂಡಲೇ ಪೂರ್ಣ ಲೆಕ್ಕ ಮಾಹಿತಿ ಸಂಗ್ರಹಿಸಿ ಜನರ ಮುಂದೆ ಇಡಿ ಎಂದು ಸಚಿವರಿಗೆ ಸಿಎಂ ತಾಕೀತು ಮಾಡಿದ್ದಾರೆ. ಸಿಎಂ ತಾಕೀತು ಮಾಡುತ್ತಿದ್ದಂತೆ ಸಚಿವರು ತುರ್ತು ಸುದ್ದಿಗೋಷ್ಟಿ ಕರೆದಿದ್ದಾರೆ.