ಬೆಂಗಳೂರು: ಎಸ್‌ಸಿ ಮತ್ತು ಎಸ್ಟಿ ನಕಲಿ ಸರ್ಟಿಫಿಕೇಟ್ ಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಸೌಧದಲ್ಲಿ ದೌರ್ಜನ್ಯ ಪ್ರತಿಬಂಧಕ ಅಧಿನಿಯಮ 1989 (ತಿದ್ದುಪಡಿ ಕಾಯ್ದೆ 2015) ಮತ್ತು ನಿಯಮಗಳು 1995 (ತಿದ್ದುಪಡಿ ನಿಯಮಗಳು 2016) ರಡಿ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿಯ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಎಸ್‌ಸಿ ಮತ್ತು ಎಸ್ಟಿ ದೌರ್ಜನ್ಯ ಸಮಿತಿ ಸಭೆಯನ್ನು ಮೂರು ತಿಂಗಳಿಗೊಮ್ಮೆ ನಡೆಸಲು ನಿರ್ಧಾರ ಮಾಡಿದ್ದೇವೆ. ಕೇಸ್ ಕೊಟ್ಟಾಗ ಅನಗತ್ಯವಾಗಿ ತಡ ಮಾಡುತ್ತಿರುವುದರ ಬಗ್ಗೆ ಸಭೆಯಲ್ಲಿ ತಿಳಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಈ ರೀತಿ ಆಗದಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಉದ್ಯೋಗ ನೀಡುವ ಅವಧಿ ವಿಸ್ತರಣೆ: ಕೇಸ್ಗಳಲ್ಲಿ ಸಾಕ್ಷಿದಾರರನ್ನು ಹೆದರಿಸುವ ಕೆಲಸ ಆಗುತ್ತಿದ್ದು, ಅವರಿಗೆ ಸೂಕ್ತ ರಕ್ಷಣೆ ಕೊಡಲಾಗುವುದು. ಎಫ್ಐಆರ್ ಮಾಡುವಾಗ ಮತ್ತು ಚಾರ್ಜ್ ಶೀಟ್ ಹಾಕುವಾಗ ಯಾವುದೇ ಸಮಸ್ಯೆ ಮಾಡಬಾರದು. ಎಸ್‌ಸಿ ಮತ್ತು ಎಸ್ಟಿ ಸರ್ಕಾರಿ ನೌಕರರು ಸತ್ತಾಗ ಅವರ ಕುಟುಂಬಕ್ಕೆ ಉದ್ಯೋಗ ಕೊಡುವಾಗ ಈಗ ಇದ್ದ ಅವಧಿ ವಿಸ್ತರಣೆ ಮಾಡಲು ತೀರ್ಮಾನ ಮಾಡಿದ್ದೇವೆ. ಅದನ್ನು ಒಂದು ವರ್ಷದಿಂದ ಎರಡು ವರ್ಷಕ್ಕೆ ಹೆಚ್ಚಿಗೆ ಮಾಡಲು ನಿರ್ಧಾರ ಮಾಡಿದ್ದೇವೆ ಎಂದರು.
ಕಾಲಮಿತಿಯಲ್ಲಿ ಬೋರ್ವೆಲ್ ಹಾಕಿಕೊಡಬೇಕು: ಸರ್ಕಾರದಿಂದ ಎಸ್ಟಿ, ಎಸ್‌ಸಿ ಸಮುದಾಯದ ಫಲಾನುಭವಿಗಳಿಗೆ ಬೋರ್ ವೆಲ್ ಮಂಜೂರು ಮಾಡಿದಾಗ ಅನಗತ್ಯವಾಗಿ ತೊಂದರೆ ಕೊಡಬಾರದು. ಕಾಲಮಿತಿಯಲ್ಲಿ ಬೋರ್ವೆಲ್ ಹಾಕಿಕೊಡಬೇಕು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಎಸ್ಸಿಪಿ ಮತ್ತು ಟಿಎಸ್ಪಿ ಹಣ ಬೇರೆ ಸಮುದಾಯಕ್ಕೆ ಉಪಯೋಗಿಸುವಂತಿಲ್ಲ. ಈ ಸಂಬಂಧ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಹಣವನ್ನು ಆಯಾ ಸಮುದಾಯಕ್ಕೆ ಮಾತ್ರ ಬಳಸಬೇಕು. ಅಗತ್ಯ ತಿದ್ದುಪಡಿ ತರಲು ಸಲಹೆ ನೀಡಿದ್ದಾಗಿ ಸಿಎಂ ಮಾಹಿತಿ ನೀಡಿದರು.
ಸಭೆ ಬಳಿಕ ಗಣೇಶೋತ್ಸವದ ಕುರಿತು ನಿರ್ಧಾರ ಪ್ರಕಟ: ಸಾರ್ವಜನಿಕ ಗಣೇಶ್ ಉತ್ಸವಕ್ಕೆ ಕೊರೊನಾ ನಿಯಮದಿಂದ ರಿಲೀಫ್ ಕೊಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸರ್ಕಾರ ಎಲ್ಲವನ್ನೂ ಗಮನಿಸಿದೆ. ರಾಷ್ಟ್ರ ಮತ್ತು ರಾಜ್ಯದಲ್ಲಿ ಮೂರನೇ ಅಲೆ ಆಂತಕ ಇದೆ. ಇದರ ಬಗ್ಗೆ ಇಂದಿನ ಸಭೆಯಲ್ಲಿ ತಜ್ಞರು ಸಂಪೂರ್ಣ ಮಾಹಿತಿ ಕೊಡ್ತಾರೆ. ಕಳೆದ ವರ್ಷ ಏನಾಯಿತು ಅನ್ನೋ ಬಗ್ಗೆ ಸಹ ಮಾಹಿತಿ ಕೊಡ್ತಾರೆ. ಶಾಲೆ ತೆರೆಯುವ ಬಗ್ಗೆಯೂ ಚರ್ಚೆ ಮಾಡುತ್ತೇವೆ ಎಂದು ಮುಖ್ಯಮಂತ್ರಿಯವರು ಹೇಳಿದರು.