ಬಳ್ಳಾರಿ: ಒಂದು ಬಾರಿ ಚಿಕಿತ್ಸೆ ಸರಿಯಲ್ಲ ಎಂದು, ಮತ್ತೊಂದು ಬಾರಿ ಚಿಕಿತ್ಸೆ ಸರಿಯಾಗಿದೆ ಅಂತ ಎರಡು ವಿಡಿಯೊ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ಕೋವಿಡ್ ಕೇರ್ ಸೆಂಟರ್ನ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸಲು ಹೋಗಿ ಕೊರೊನಾ ಸೋಂಕಿತನೋರ್ವ ತಾನೇ ಗೊಂದಲದಲ್ಲಿ ಸಿಲುಕಿದ್ದಾನೆ.
ವಿದ್ಯಾನಗರ ಬಳಿಯಿರುವ ಜಿಂದಾಲ್ ಸಮೂಹ ಸಂಸ್ಥೆಯ ಕೋವಿಡ್ ಕೇರ್ ಸೆಂಟರ್ನಲ್ಲಿ ದಾಖಲಾದ ನಾಲ್ಕು ತಾಸುಗಳಲ್ಲಿಯೇ 56 ನಿಮಿಷದ ವಿಡಿಯೊವೊಂದನ್ನು ಸೋಂಕಿತ ಯುವಕ ರೆಕಾರ್ಡ್ ಮಾಡಿದ್ದಾನೆ.
'ಇಲ್ಲಿ ಯಾವುದೂ ಸರಿಯಾಗಿಲ್ಲ. ಗ್ಲುಕೋಸ್ ಹಾಕಿ ಹೋದ ವೈದ್ಯರು ಅದು ಖಾಲಿಯಾಗಿ ನಾಲ್ಕು ಗಂಟೆಗಳಾದರೂ ಇತ್ತ ಮರಳಿಲ್ಲ' ಎಂದು ಆರೋಪಿಸಿರುವ ವಿಡಿಯೊ ತುಣುಕನ್ನು ಸೋಷಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದಾನೆ.
ಮಾರನೇ ದಿನ ಮತ್ತೊಂದು ವಿಡಿಯೊ ಮಾಡಿರುವ ಆತ, ನಿನ್ನೆ ನನಗೆ ನಾಲ್ಕೈದು ತಾಸು ಸ್ವಲ್ಪ ಸಮಸ್ಯೆ ಆಯಿತು. ಆ ಮೇಲೆ ವೈದ್ಯರು ಬಂದು ಚಿಕಿತ್ಸೆ ನೀಡಿದ್ರು. ನಾನು ಸ್ವಲ್ಪ ಸುಧಾರಿಸಿದೆ. ವೈದ್ಯರಲ್ಲಿ ನಾನು ಕೈಮುಗಿದು ಕೇಳಿಕೊಳ್ಳುವೆ, ಇಲ್ಲಿ ಊಟ ತಿಂಡಿ ಎಲ್ಲವೂ ಸರಿಯಾಗಿ ಕೊಡ್ತಾರೆ. ನನ್ನಿಂದ ಏನಾದ್ರೂ ತಪ್ಪಾದರೆ ದಯವಿಟ್ಟು ಕ್ಷಮೆ ಇರಲಿ ಎಂದು ಪದೇ ಪದೇ ಹೇಳಿದ್ದು, ಅದನ್ನು ವಾಟ್ಸಾಪ್ ಗ್ರೂಪ್ಗಳಲ್ಲಿ ಹಂಚಿಕೊಂಡಿದ್ದಾನೆ.
ಮೊದಲಿಗೆ ಈ ಯುವಕ ಪರವಾಗಿ ನಿಂತ ಕರ್ನಾಟಕ ಜನಸೈನ್ಯ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಯರಿಸ್ವಾಮಿ ಅವರು, ಸೋಂಕಿತನು ಮೊದಲು ಹರಿಬಿಟ್ಟ ವಿಡಿಯೊ ಶೇರ್ ಮಾಡಿ, ಜಿಂದಾಲ್ ವರ್ತನೆಯನ್ನ ಖಂಡಿಸಿದ್ದಾರೆ.