ಬಳ್ಳಾರಿ: ಮಹಾಮಾರಿ ಕೊರೊನಾ ಎರಡನೇ ಅಲೆ ನಿಯಂತ್ರಣ ಮಾಡುವ ಸಲುವಾಗಿ ರಾಜ್ಯ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದೆ. ಆದರೆ ಇದರಿಂದ ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಮಂಗಳಮುಖಿಯರ ಬದುಕು ದುಸ್ತರವಾಗಿದೆ.
ಲಾಕ್ಡೌನ್ ಜಾರಿಯಾದ ಬಳಿಕ ಬಹುಸಂಖ್ಯಾತ ಮಂಗಳಮುಖಿಯರು ಅಕ್ಷರಶಃ ನಿರುದ್ಯೋಗಿಗಳಾಗಿದ್ದಾರೆ. ವಾರದ ಭಿಕ್ಷಾಟನೆಗೂ ಇದೀಗ ಬ್ರೇಕ್ ಬಿದ್ದಿದೆ. ಅನೇಕ ಮಂಗಳಮುಖಿಯರು ವಾರದ ಭಿಕ್ಷಾಟನೆಯಲ್ಲೇ ಜೀವನ ಸಾಗಿಸುತ್ತಿದ್ದರು. ಇನ್ನೂ ಕೆಲ ಮಂಗಳಮುಖಿಯರು ಸ್ವಾವಲಂಬಿ ಜೀವನ ಸಾಗಿಸೋಕೆ ಸ್ವಯಂ ಉದ್ಯೋಗವನ್ನ ಆರಂಭಿಸಿದ್ದರು. ಅದು ಕೂಡ ನಿಂತಿದೆ. ಒಂದೊತ್ತಿನ ಊಟಕ್ಕೂ ಪರದಾಟ ನಡೆಸುವಂತಹ ಸ್ಥಿತಿ ನಿರ್ಮಾಣವಾಗಿದೆ.
ಒಂದೆಡೆ ಕೊರೊನಾ ಮಹಾಮಾರಿ ಸೋಂಕು ಎಲ್ಲರನ್ನೂ ಬೆಂಬಿಡದೇ ಕಾಡುತ್ತಿದೆ. ಮತ್ತೊಂದೆಡೆ ಮಂಗಳಮುಖಿಯರು ಸೇರಿದಂತೆ ಅನಾಥ, ನಿರ್ಗತಿಕರ ಬದುಕು-ಬವಣೆ ಮಾತ್ರ ಮೂರಾಬಟ್ಟೆಯಾಗಿದೆ.
ರಾಜ್ಯ ಸರ್ಕಾರ ಪಡಿತರ ಅಕ್ಕಿ ವಿತರಿಸಿದೆಯಾದ್ರೂ ಅದೆಲ್ಲಾ ಉಳ್ಳವರ ಕೈ ಸೇರಿದೆ. ಬಹುತೇಕ ಬಡವರು ಹಾಗೂ ಮಂಗಳಮುಖಿಯರು ಪಡಿತರ ಅಕ್ಕಿಯಿಂದ ವಂಚಿತರಾಗಿದ್ದಾರೆ. ಹೀಗಾಗಿ, ರಾಜ್ಯ ಸರ್ಕಾರ ಏನೇ ಪ್ರಯತ್ನ ನಡೆಸಿದ್ರೂ ಕೂಡ ಬಡವರ, ಹಸಿದವರ ಹೊಟ್ಟೆ ಮಾತ್ರ ತುಂಬಿಸಲಿಕ್ಕೆ ಆಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.
ಮಂಗಳಮುಖಿಯರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿ: ಬಳ್ಳಾರಿಯ ಮಂಗಳಮುಖಿ ಪ್ರಗತಿ ಸದಾ ಸೇವಾ ಸಂಸ್ಥೆಯ ಅಧ್ಯಕ್ಷ ಪರ್ವೀನ್ ಬಾನು, ಉಪಾಧ್ಯಕ್ಷ ಭರತ್, ಕಾರ್ಯದರ್ಶಿ ಚಾಂದಿನಿ, ಬೋರ್ಡಿನ ಸದಸ್ಯೆ ಸಂಧ್ಯಾ ಮಂಗಳಮುಖಿಯರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಆಗ್ರಹಿಸಿದ್ದಾರೆ.
ಮಂಗಳಮುಖಿಯರಿಗೆ ಸಹಾಯಹಸ್ತ ಚಾಚಲು ಕೋರಿಕೆ: ಆರ್ಥಿಕ ಸಂಕಷ್ಟದಲ್ಲಿರುವ ಮಂಗಳಮುಖಿಯರಿಗೆ ಸಹಾಯಹಸ್ತ ಚಾಚಲು ಈ ಕೆಳಗಿನ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಲು ಕೋರಿದ್ದಾರೆ.
Account number: 64086000866
PAN number: AABAP7195F
IFSC code: SBIN0040402