ಬಳ್ಳಾರಿ: 74ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಆನಂದ್ ಸಿಂಗ್ ಧ್ವಜಾರೋಹಣ ನೆರವೇರಿಸಿದರು.
ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಸಾರ್ವಜನಿಕರು ಆಗಮಿಸಿದ್ದರು. ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳು ಮಾತ್ರ ಭಾಗಿಯಾಗಿರೋದು ವಿಶೇಷವಾಗಿತ್ತು.
ಸ್ವಾತಂತ್ರ್ಯ ಪೂರ್ವದಲ್ಲಿ ಗಣಿನಾಡು ಸ್ಫೂರ್ತಿದಾಯಕ ಆಗಿತ್ತು:
ಸ್ವಾತಂತ್ರ್ಯ ಪೂರ್ವದಲ್ಲೂ ಕೂಡ ಗಣಿನಾಡು ಬಳ್ಳಾರಿ ಜಿಲ್ಲೆಯು ಸ್ಫೂರ್ತಿದಾಯಕ ಹಾಗೂ ಮಾದರಿ ಜಿಲ್ಲೆಯಾಗಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಆನಂದ್ ಸಿಂಗ್ ಹೇಳಿದರು. ಭಾಷಾ ಬಾಂಧವ್ಯವನ್ನ ಈ ಜಿಲ್ಲೆ ವಿಶೇಷವಾಗಿ ಹೊಂದಿದೆ. ತೆಲುಗು-ಕನ್ನಡ ಭಾಷಿಕರ ನಡುವಿನ ಹೊಂದಾಣಿಕೆಯ ಜೀವನ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರು.
ಬಳ್ಳಾರಿಯ ಡಿ.ಸಿ.ನಕುಲ್ ಅವರಿಂದ ಧ್ವಜಾರೋಹಣ:
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ 74ನೇ ಸ್ವಾತಂತ್ರ್ಯ ಧ್ವಜಾರೋಹಣ ನೆರವೇರಿಸಿದರು. ಎಡಿಸಿ ಮಂಜುನಾಥ, ಎಸಿ ರಮೇಶ ಕೋನರೆಡ್ಡಿ, ತಹಸೀಲ್ದಾರ್ ಮೆಹತಾ ಸೇರಿದಂತೆ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.