ಅಥಣಿ: ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿಯ ಸುರಕ್ಷತೆಗೆ ಕ್ರಮ ತೆಗೆದುಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಜಾರ್ಖಂಡ್ ರಾಜ್ಯದ ಶಿಖರ್ಜಿ ಪ್ರವಾಸಿಗರ ನಂಟಿನಿಂದ ಅಥಣಿ ತಾಲೂಕಿನಲ್ಲಿ ಮೇ 26 ರಂದು 12 ಜನರಲ್ಲಿ ಸೋಂಕು ದೃಢಪಟ್ಟಿತ್ತು. ಸೋಂಕಿತರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ನಿರ್ದಿಷ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ಥಳಗಳಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ತಾಲೂಕಿನ ಝುಂಜರವಾಡ, ಕೊಕಟನೂರ, ನಂದಗಾವ, ಸವದಿ, ಗ್ರಾಮಗಳಲ್ಲಿ ಕ್ವಾರಂಟೈನ್ನಲ್ಲಿರುವ ಇವರನ್ನು ನೋಡಿಕೊಳ್ಳಲು ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.
ಆದರೆ, ತಾಲೂಕು ವೈದ್ಯಾಧಿಕಾರಿಗಳ ಬೇಜವಾಬ್ದಾರಿಯಿಂದ ಒಳ್ಳೆಯ ಮಾಸ್ಕ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ಸಿಗದೇ ಆತಂಕದಲ್ಲಿ ಕೆಲಸ ನಿರ್ವಹಿಸುವ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾ.ಪಂ ಸಿಬ್ಬಂದಿಯೊಬ್ಬರು ಈಟಿವಿ ಭಾರತಕ್ಕೆ (ಆಪ್ ದಿ ರೆಕಾರ್ಡ್) ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ತಾಲೂಕು ವೈದ್ಯಾಧಿಕಾರಿ ಹೆಚ್. ಕೊಪ್ಪದ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಕೊರೊನಾ ತಡೆಗಟ್ಟುವ ಸಲಕರಣೆ ನೀಡುವುದಾಗಿ ತಿಳಿಸಿದ್ದಾರೆ.