ಬೆಳಗಾವಿ: ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ದೇವಸ್ಥಾನಗಳ ಆವರಣಗಳಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಹಿಂದೂ ಸಂಘಟನೆಗಳು ಆಗ್ರಹಿಸುತ್ತಿವೆ. ಇದೀಗ ಸವದತ್ತಿ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಹಿಂದುಯೇತರರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಸವದತ್ತಿ ಶಾಸಕ ಹಾಗೂ ಡೆಪ್ಯುಟಿ ಸ್ಪೀಕರ್ ಆನಂದ್ ಮಾಮನಿ ಅವರಿಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.
ಇಂದು ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ದೇವಿಯ ದರ್ಶನ ಪಡೆದರು. ಬಳಿಕ ಸ್ಥಳೀಯ ಶಾಸಕ ಆನಂದ ಮಾಮನಿ ಅವರನ್ನು ಭೇಟಿಯಾಗಿ ಹಿಂದುಯೇತರ ವ್ಯಾಪಾರಸ್ಥರಿಗೆ ದೇವಸ್ಥಾನ ಆವರಣದಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡದಂತೆ ಮನವಿ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುತಾಲಿಕ್, ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ಕ್ಷೇತ್ರ ಪ್ರಸಿದ್ಧ ಸ್ಥಳ, ಲಕ್ಷಾಂತರ ಭಕ್ತಾದಿಗಳು ಬರುವಂತಹ ಪವಿತ್ರ ಭೂಮಿ. ಕುಡಿಯುವ ನೀರು ಸೇರಿ ಎಲ್ಲಾ ಮೂಲ ಸೌಕರ್ಯ ಅಭಿವೃದ್ಧಿಗೆ ಮನವಿ ಮಾಡಿದ್ದೇನೆ. ಸವದತ್ತಿ ಯಲ್ಲಮ್ಮ ದೇವಸ್ಥಾನ ಆವರಣದಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಮುಸ್ಲಿಂ ವರ್ತಕರಿದ್ದಾರೆ. ಧಾರ್ಮಿಕ ದತ್ತಿ ನಿಯಮ ಪ್ರಕಾರ ಹಿಂದುಯೇತರರಿಗೆ ಇಲ್ಲಿ ಅವಕಾಶ ಕೊಡಬಾರದು ಎಂದರು.
ಧಾರ್ಮಿಕ ದತ್ತಿ ಇಲಾಖೆಯ ಸಿಬ್ಬಂದಿ ಹಿಂದುಯೇತರರಿದ್ದರೆ ಅವರನ್ನು ವರ್ಗಾವಣೆ ಮಾಡಬೇಕು. ಈ ಸಂಬಂಧ ಸ್ಥಳೀಯ ಶಾಸಕರ ಜೊತೆಗೆ ಚರ್ಚೆ ಮಾಡಿದ್ದೇನೆ. ಸಭೆ ಮಾಡಿ ಚರ್ಚಿಸುವುದಾಗಿ ಹೇಳಿದ್ದಾರೆ. ನಮ್ಮ ಬೇಡಿಕೆ ಈಡೇರದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಮುತಾಲಿಕ್ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.
ಓದಿ: ಹೆಂಡ್ತಿ,ಅತ್ತೆ,ಮಾವನ ಮೇಲೆ ಮಾರಣಾಂತಿಕ ಹಲ್ಲೆ.. ಗಂಡನ ಮೃಗೀಯ ವರ್ತನೆ ಸಿಸಿಟಿವಿಯಲ್ಲಿ ಸೆರೆ