ಬೆಳಗಾವಿ : ಕಳೆದ ಮೂರು ದಿನಗಳ ಹಿಂದೆ ತಹಶೀಲ್ದಾರ್ ಕಚೇರಿಯಿಂದ ವರ್ಗಾವಣೆಯಾಗಿದ್ದ ಮಂಜುಳಾ ನಾಯಕ ಮತ್ತೆ ಬೆಳಗಾವಿ ತಾಲೂಕು ತಹಶೀಲ್ದಾರ್ ಆಗಿ ಮುಂದುವರೆದಿದ್ದಾರೆ.
ಬೆಳಗಾವಿ ತಾಲೂಕು ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಂಜುಳಾ ನಾಯಕ ಅವರನ್ನು ಸರ್ಕಾರ ಕಳೆದ ಮೂರು ದಿನಗಳ ಹಿಂದೆ ವರ್ಗಾಯಿಸಿ ಆದೇಶ ಹೊರಡಿಸಿತ್ತು. ಈ ವರ್ಗಾವಣೆ ಆದೇಶವನ್ನು ಪ್ರಶ್ನಿಸಿ ಮಂಜುಳಾ ಕೆಎಟಿ ಮೊರೆ ಹೋಗಿದ್ದರು. ಸದ್ಯ ಇವರ ವರ್ಗಾವಣೆಗೆ ತಡೆ ನೀಡಿರುವ ಕೆಎಟಿ, ಅಧಿಕಾರದಲ್ಲಿ ಮುಂದುವರೆಯುವಂತೆ ಆದೇಶ ನೀಡಿದೆ.
ಮಂಜುಳಾ ನಾಯಿಕ ವರ್ಗಾವಣೆ ನಂತರ ಅವರ ಸ್ಥಾನಕ್ಕೆ ಆರ್ ಕೆ ಕುಲಕರ್ಣಿ ಅವರನ್ನು ನೇಮಕ ಮಾಡಲಾಗಿತ್ತು. ಆದರೆ ಮಂಜುಳಾ ಅವರು ಕೆಎಟಿ ಮೊರೆ ಹೋಗಿ ಪುನಃ ಬೆಳಗಾವಿ ತಹಶೀಲ್ದಾರ್ ಆಗಿ ಮುಂದುವರೆದ ಹಿನ್ನೆಲೆ ಬಂದ ದಾರಿಗೆ ಸುಂಕ ಇಲ್ಲದಂತೆ ಆರ್ ಕೆ ಕುಲಕರ್ಣಿ ಮರಳಿ ಎಸಿ ಕಚೇರಿಗೆ ತೆರಳಿದ್ದಾರೆ.