ಅಥಣಿ (ಬೆಳಗಾವಿ) : ನೆರೆಯ ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ ಕಡಿಮೆ ಆದರೂ ಕೃಷ್ಣಾ ನದಿಯಲ್ಲಿನ ಹೊರ ಹರಿವು ಮಾತ್ರ ಮುಂದುವರೆದಿದೆ. ಇದರಿಂದ ಕೃಷ್ಣಾ ನದಿ ತೀರದ ಹಾಗೂ ತಗ್ಗು ಪ್ರದೇಶದಲ್ಲಿರುವ ಕೆಲ ಗ್ರಾಮಗಳು ಜಲಾವೃತಗೊಂಡಿವೆ.
ಸದ್ಯ ಹಿಪ್ಪರಗಿ ಬ್ಯಾರೇಜ್‌ನಿಂದ 4 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದ ನೀರನ್ನು ಆಲಮಟ್ಟಿ ಜಲಾಶಯಕ್ಕೆ ಹರಿಬಿಡಲಾಗಿದೆ. ಆಲಮಟ್ಟಿ ಬ್ಯಾರೇಜ್ ಹಿನ್ನೀರಿನಿಂದ ಅಥಣಿ ತಾಲೂಕಿನ ಝುಂಜರವಾಡ ಶಿರಹಟ್ಟಿ, ಸವದಿ ಹಾಗೂ ಬಳವಾಡ ಗ್ರಾಮಗಳು ಸಂಪೂರ್ಣ ಜಲಾವೃತವಾಗಿ ಹಲವರು ಸೂರನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ.
ಕಳೆದ 2005, 2019 ಹಾಗೂ ಈ ವರ್ಷ ಸತತವಾಗಿ ಮೂರು ಬಾರಿ ಕೃಷ್ಣಾ ನದಿ ಪ್ರವಾಹದಿಂದ ರೈತರ ಸ್ಥಿತಿ ಅಯೋಮಯವಾಗಿದೆ. ಕಟಾವಿನ ಹಂತಕ್ಕೆ ಬಂದ ಕಬ್ಬು ನೀರಲ್ಲಿ ಮುಳುಗುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ.
ಇದರಿಂದಾಗಿ ಪ್ರತಿ ರೈತರಿಗೆ ಲಕ್ಷಾಂತರ ರೂಪಾಯಿ ಬೆಳೆ ಹಾನಿಯಾಗಿದೆ. ಸರ್ಕಾರದ ಅಲ್ಪ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸಿಎಂ ಬೊಮ್ಮಾಯಿ ಅವರು ಅಥಣಿಯ ಭೇಟಿಗೂ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕೃಷ್ಣಾ ನದಿ ಪ್ರವಾಹ: ನಡುಗಡ್ಡೆಯಲ್ಲಿ ಸಿಲುಕಿದ್ದ 54 ಜನರನ್ನು ರಕ್ಷಿಸಿದ SDRF ತಂಡ
ಕಳೆದೊಂದು ವಾರದಿಂದ ಪ್ರವಾಹಕ್ಕೆ ರೋಸಿ ಹೋಗಿದ್ದೇವೆ, ನಮ್ಮನ್ನು ಆಳುವ ನಾಯಕರಾಗಲಿ, ಅಧಿಕಾರಿಗಳಾಗಲಿ ಭೇಟಿ ನೀಡಿಲ್ಲ, ನಮ್ಮ ಸಮಸ್ಯೆ ಕೇಳಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕಾರಣಿಗಳು ನಮ್ಮ ಬಳಿ ಬರ್ತಾರೆಂದು ನೆರೆ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದರು.
ಕೃಷ್ಣಾ ನದಿ ತೀರದ ರೈತರ ಬಾಳು ಹಸನಾಗುವ ಬದಲು, ಪ್ರತಿವರ್ಷ ಪ್ರವಾಹದಿಂದ ತತ್ತರಿಸಿ ಹೋಗಿದ್ದಾರೆ. ಇಲ್ಲಿನ ರೈತರ ಸಂಕಷ್ಟವನ್ನು ಕೇಳುವವರೇ ಇಲ್ಲದಂತಾಗಿದೆ. ಸರ್ಕಾರ ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕಿದೆ.