ಬೆಳಗಾವಿ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ಹರಡುವಿಕೆ ತಡೆಗಟ್ಟುವುದು ದೊಡ್ಡ ಸವಾಲಿನ ಕೆಲಸವಾಗಿದ್ದು, ಬಿಗಿ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳು ಮತ್ತು ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲ ಉಪ ವಿಭಾಗಾಧಿಕಾರಿಗಳು ಮತ್ತು ತಾಲೂಕುಗಳ ಅಧಿಕಾರಿಗಳ ಜತೆ ಇಂದು ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಕಂಟೈನ್ಮೆಂಟ್ ಜೋನ್ ನಿರ್ವಹಣೆ ಸೇರಿದಂತೆ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಎಲ್ಲ ಅಧಿಕಾರಿಗಳಿಗೆ ಅಧಿಕಾರವನ್ನು ನೀಡಲಾಗಿದೆ. ಯಾವುದೇ ತುರ್ತು ನಿರ್ಧಾರ ಅಥವಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಬೆಳಗಾವಿ ರೆಡ್ ಜೋನ್ ನಲ್ಲಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಯಾವುದೇ ಕಾರಣಕ್ಕೂ ಉದಾಸೀನತೆ ತೋರಿಸಬಾರದು. ಕೆಲವು ಕಡೆ ಯಾವುದೇ ಪಾಸಿಟಿವ್ ಕಂಡುಬಂದಿಲ್ಲ ಎಂಬ ನಿರ್ಲಕ್ಷ್ಯ ತೋರದೇ ಈಗಾಗಲೇ ನಡೆಸಿರುವ ಮನೆ ಮನೆ ಸಮೀಕ್ಷೆ ಎರಡು ದಿನಗಳಲ್ಲಿ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು ಎಂದರು.
ಪ್ರತಿಯೊಂದು ತಾಲೂಕು ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇರುವ ಹೋಟೆಲ್ ಗಳನ್ನು ಗುರುತಿಸಿ ವರದಿ ನೀಡುವುದರ ಜತೆಗೆ ಅಗತ್ಯಬಿದ್ದರೆ ಅವುಗಳ ಸ್ವಾಧೀನಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.
ಜಿಪಂ ಸಿಇಓ ಡಾ.ರಾಜೇಂದ್ರ ಮಾತನಾಡಿ, ಕಂಟೈನ್ಮೆಂಟ್ ಜೋನ್ ಗಳಲ್ಲಿ ಜನಸಂಚಾರ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕು. ಅತೀಯಾದ ಜ್ವರ,ಕೆಮ್ಮು ಇರುವ ವ್ಯಕ್ತಿಗಳ ಬಗ್ಗೆ ನಿಗಾ ವಹಿಸಿ ಅವರನ್ನು ಕ್ವಾರಂಟೈನ್ ನಲ್ಲಿ ಇರಿಸಬೇಕು. ಅಗತ್ಯ ವಸ್ತುಗಳ ಪೂರೈಕೆಗೆ ಸ್ವಯಂಸೇವಕರನ್ನು ಗುರುತಿಸಿ ಅವರ ಮೂಲಕವೇ ಮನೆ ಮನೆಗಳಿಗೆ ಸಾಮಗ್ರಿಗಳನ್ನು ಪೂರೈಸುವ ಕ್ರಮ ಕೈಗೊಳ್ಳಬೇಕು ಎಂದರು.