ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಾಗೂ ಕೆಲ ಪ್ರಮುಖ ಜಲಾಶಯಗಳಿಂದ ಕೃಷ್ಣೆಗೆ ನೀರು ಹರಿಬಿಟ್ಟ ಹಿನ್ನೆಲೆ ಯಲ್ಲಿ ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಗ್ರಾಮಗಳು ಪ್ರವಾಹ ಭೀತಿಯಲ್ಲಿವೆ.
ಎಸ್ಡಿಆರ್ಎಫ್, ಫೈರ್ ಫೈಟರ್, ಹೋಮ್ಗಾರ್ಡ್ ಮತ್ತು ಪ್ಯಾರಾ ಮಿಲಿಟರಿ ಪಡೆಯ ಸಹಾಯ ಪಡೆದ ಜಿಲ್ಲಾಡಳಿತ, ಪ್ರವಾಹ ಸಂತ್ರಸ್ತರ ನೆರವಿಗೆ ಬಂದಿವೆ.
ಬೆಳಗಾವಿ ಮರಾಠಾ ಲಘು ಪದಾತಿದಳದ ನೂರಕ್ಕೂ ಹೆಚ್ಚು ಸಿಬ್ಬಂದಿ ರಕ್ಷಣಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿಪ್ಪರಗಿ ಬ್ಯಾರೆಜ್ನ 22 ಗೇಟ್ ಮೂಲಕ ನೀರನ್ನು ಹೊರಹರಿಸಲಾಗುತ್ತಿದೆ. ಚಿಕ್ಕೋಡಿ ತಾಲೂಕಿನ ಹರಿದಕ್ರಾಂತಿ, ಕಲ್ಲೋಳ, ಇಂಗಳಿ ಸೇರಿದಂತೆ ಹಲವೆಡೆ ಸಂತ್ರಸ್ತರ ರಕ್ಷಣೆ ಮಾಡಲಾಗುತ್ತಿದೆ. ನಡುಗಡ್ಡೆಗಳಂತಾದ ನದಿ ತೀರದ ಜಮೀನುಗಳಲ್ಲಿ ಸಿಲುಕಿದ್ದ ನೂರಕ್ಕೂ ಹೆಚ್ಚು ಕುಟುಂಬಗಳನ್ನು ಅಪಾಯದಿಂದ ಬಚಾವ್ ಮಾಡಲಾಗಿದೆ. ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಳ್ಳಿ, ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಸೇರಿದಂತೆ ಹಲವು ಅಧಿಕಾರಿಗಳ ಉಸ್ತುವಾರಿ ವಹಿಸುತ್ತಿದ್ದಾರೆ.
ಮೊನ್ನೆಯಷ್ಟೇ ನದಿಯ ಹಿನ್ನೀರು ದಾಟಿ ಬರುವ ವೇಳೆ ನೀರಿನಲ್ಲಿ ಸಿಲುಕಿ ಮುಳುಗುತ್ತಿದ್ದ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರೇ ಪ್ರಾಣಾಪಾಯದಿಂದ ಪಾರು ಮಾಡಿದ್ದರು. ಸಹಾಯಕ್ಕೆ ಬಾರದ ತಾಲೂಕು, ಜಿಲ್ಲಾಡಳಿತದ ವಿರುದ್ಧ ಜನರು ಬೇಸರ ವ್ಯಕ್ತಪಡಿಸಿದ್ದರು. ಇದೀಗ ಸಂತ್ರಸ್ತರ ರಕ್ಷಣೆಯಲ್ಲಿ ಜಿಲ್ಲಾಡಳಿತ ತೊಡಗಿದೆ.