ಚಿಕ್ಕೋಡಿ: ಉಪ ಚುನಾವಣೆ ಏಕೆ ಬಂತು ಎಂದು ಮತದಾರರು ಆಲೋಚಿಸಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ (2018) ಯಡಿಯೂರಪ್ಪ ಮುಖ್ಯಮಂತ್ರಿಯಾಗ್ತಾರೆ. ರಾಜ್ಯ ಅಭಿವೃದ್ಧಿ ಆಗುತ್ತದೆ ಎಂದು ಜನ ಅಪೇಕ್ಷೆಪಟ್ಟಿದ್ದರು. ಆದರೆ, ಕೊಂಚ ಅಂತರದಲ್ಲಿ ಅದು ಸಾಧ್ಯವಾಗಲಿಲ್ಲ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಕಾಗವಾಡ ವಿಧಾನಸಭಾ ಕ್ಷೇತ್ರದ ಮದಭಾವಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಧಿಕಾರದಲ್ಲಿದ್ದ ಅಪವಿತ್ರ ಮೈತ್ರಿ ಸರ್ಕಾರ ಪತನ ಕಂಡಿದೆ. ಇದರ ಪ್ರತಿಫಲವಾಗಿ ಬಿಎಸ್ವೈ ಮತ್ತೆ ಸಿಎಂ ಆಗಿದ್ದಾರೆ. ಅಂದು ರಾಜಕೀಯ ಲೆಕ್ಕಾಚಾರ ತಪ್ಪಿದ್ದರಿಂದ 8 ಸೀಟು ಕಡಿಮೆಯಾದವು. ಇದನ್ನೇ ಅಸ್ತ್ರ ಮಾಡಿಕೊಂಡು ಕಾಂಗ್ರೆಸ್, ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದವು ಎಂದರು.
ರಾಜ್ಯದಲ್ಲಿ ದುರಾಡಳಿತ ನೀಡಿದ ಹಾಗೂ ರಾಜ್ಯದ ಅಭಿವೃದ್ಧಿಗೆ ಶ್ರಮಿಸದ ಕಾರಣ ಬೇಸತ್ತು ಕಾಂಗ್ರೆಸ್ ಹಾಗೂ ಜೆಡಿಎಸ್ನ 17 ಶಾಸಕರು ರಾಜೀನಾಮೆ ಕೊಟ್ಟರು. ಇದರ ಪ್ರತಿಫಲವಾಗಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ನಾಡಿನ ಒಳತಿಗಾಗಿ ಈ ಎಲ್ಲಾ ಅನರ್ಹ ಶಾಸಕರನ್ನು ಗೆಲ್ಲಿಸಬೇಕಾದದ್ದು ನಮ್ಮ ಕರ್ತವ್ಯ ಎಂದು ಹೇಳಿದರು.
ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಶ್ರೀಮಂತ ಪಾಟೀಲ ಹಣಕ್ಕಾಗಿ ಪಕ್ಷ ಬಿಡಲಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಹಾಸನ, ಮಂಡ್ಯ, ರಾಮನಗರ ಜಿಲ್ಲೆಗಳಿಗೆ ಮಾತ್ರ ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತಿದ್ದರು. ಅವುಗಳಿಗೆ ಮಾತ್ರ ಸರ್ಕಾರ ಸೀಮಿತವಾಗಿತ್ತು. ಉತ್ತರ ಕರ್ನಾಟಕ ಭಾಗಕ್ಕೆ ಮಲತಾಯಿ ಧೋರಣೆ ತೋರಿದರು. ಆದ್ದರಿಂದ 17 ಶಾಸಕರು ರಾಜೀನಾಮೆ ಕೊಟ್ಟರು. ಈಗ ಕ್ಷೇತ್ರದ ಅಭಿವೃದ್ಧಿಗಾಗಿ ಮತ್ತೊಮ್ಮೆ ಅವಕಾಶ ಕಲ್ಪಿಸಿಕೊಡಿ. ಶ್ರೀಮಂತ ಪಾಟೀಲಗೆ ಮತ ನೀಡಿ ಎಂದು ಎಂದು ಮನವಿ ಮಾಡಿದರು.