ಬೆಳಗಾವಿ : ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ವತಿಯಿಂದ ನಡೆಯಲಿರುವ ಬೆಳಗಾವಿ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ ನಗರದ ವಡಗಾವಿಯಲ್ಲಿ ಅದ್ಧೂರಿ ಪ್ರಾರಂಭ ಪಡೆದಿದ್ದು, ಸರ್ವಾಧ್ಯಕ್ಷ ಶಿವಶಂಕರ್ ಹಿರೇಮಠ್ ಉದ್ಘಾಟಿಸಿದರು.
ಸುಮಾರು 7 ವರ್ಷಗಳಿಂದ ನಡೆದುಕೊಂಡು ಬಂದಿರುವ ಬೆಳಗಾವಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಈ ವರ್ಷವೂ ಅದ್ಧೂರಿಯಾಗಿ ಉದ್ಘಾಟನೆಗೊಂಡಿದೆ. ಸಮ್ಮೇಳನದ ಸರ್ವಾಧ್ಯಕ್ಷರಾದ ಶಿವಶಂಕರ್ ಹಿರೇಮಠ್ ಅವರನ್ನು ಮುತ್ತೈದೆಯರ ಪೂರ್ಣ ಕುಂಭ ಹಾಗೂ ಅನೇಕ ಕಲಾ ತಂಡಗಳು ಮೆರವಣಿಗೆ ಮೂಲಕ ಸ್ವಾಗತ ಮಾಡಿಕೊಂಡವು.
ಸಮ್ಮೇಳನದ ಕುರಿತು ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಮಂಗಲಾ ಮೆಟಗುಡ್ಡ, 105 ವರ್ಷದ ಬಳಿಕ ಬೆಳಗಾವಿಯ ದಕ್ಷಿಣ ಭಾಗದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತೋಷವಾಗಿದೆ. ಸರಕಾರಕ್ಕೆ ಬೇಡವಾದ ಇಲಾಖೆಯನ್ನು ಸುವರ್ಣ ಸೌಧಕ್ಕೆ ಸ್ಥಳಾಂತರಿಸಿ ಎಂದರೆ ಇಲ್ಲಿ ಇರುವ ಇಲಾಖೆಯನ್ನೇ ದಕ್ಷಿಣ ಕರ್ನಾಟಕಕ್ಕೆ ಸ್ಥಳಾಂತರ ಮಾಡಿದೆ. ನಮಗೆ ಕನ್ನಡ ಸಂಸ್ಕೃತಿ ಇಲಾಖೆ ನೀಡಿದರೆ ಅಭಿವೃದ್ಧಿ ಮಾಡಲು ಅನುಕೂಲವಾಗಲಿದೆ ಎಂದರು.
ಮರಾಠಿ ಪ್ರಾಬಲ್ಯದಲ್ಲಿ ಕನ್ನಡ ಸಮ್ಮೇಳನದ ಕಲರವ :
ಹೆಚ್ಚು ಮರಾಠಿ ಪ್ರಾಬಲ್ಯವನ್ನು ಹೊಂದಿರುವ ಬೆಳಗಾವಿಯ ವಡಗಾವಿ ಕ್ಷೇತ್ರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿದ್ದು, ಸಾವಿರಾರು ಕನ್ನಡಿಗರ ಜೊತೆ ಸೇರಿ ಮರಾಠಿಗರು ಕನ್ನಡ ಜಾತ್ರೆ ಮಾಡಿದ್ದು ವಿಶೇಷವಾಗಿತ್ತು. ಕೆಲ ವರ್ಷಗಳ ಹಿಂದೆ ಕೆಲವು ಸಂಘಟನೆಗಳು ಕನ್ನಡ ಸಾಹಿತ್ಯ ಸಮ್ಮೇಳನ ಆಚರಿಸಲು ವಿರೋಧ ಮಾಡಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ಮರಾಠಿಗರು ಕನ್ನಡ ಪ್ರೀತಿಗೆ ಮುಂದಾಗಿದ್ದಾರೆ. ಇನ್ನು ಸಮ್ಮೇಳನದಲ್ಲಿ ಅನೇಕ ಸಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ರಂಜಿಸಿದವು.