ನವದೆಹಲಿ: ಆಧಾರ್ ಕಾರ್ಡ್, ಪಾನ್ ಕಾರ್ಡ್, ಮೊಬೈಲ್ ಸಂಖ್ಯೆ ಸೇರಿದಂತೆ ಯಾವುದೇ ದಾಖಲೆಗಳನ್ನು ನೀಡದೇ ಹಿಂತೆಗೆದುಕೊಳ್ಳಲಾದ 2 ಸಾವಿರ ಮುಖಬೆಲೆಯ ನೋಟುಗಳನ್ನು ಬ್ಯಾಂಕ್ಗಳಲ್ಲಿ ವಿನಿಮಯ ಮಾಡಿಕೊಳ್ಳುವುದರ ವಿರುದ್ಧ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. ಈ ಬಗ್ಗೆ ನಿರ್ಧರಿಸುವ ಅಧಿಕಾರ ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ಗೆ ಇದೆ ಎಂದು ಹೇಳಿದೆ.
ರದ್ದಾಗಿರುವ 2 ಸಾವಿರ ಮೌಲ್ಯದ ನೋಟುಗಳನ್ನು ಜನರು ಯಾವುದೇ ದಾಖಲೆಗಳಿಲ್ಲದೆಯೇ ಬ್ಯಾಂಕ್ಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು ಎಂಬ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಸಲ್ಲಿಸಲಾದ ಮನವಿಯನ್ನು ಇಂದು ವಿಚಾರಣೆಗೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್ ನರಸಿಂಹ ಅವರಿದ್ದ ಪೀಠ, ಅರ್ಜಿಯನ್ನು ತಿರಸ್ಕರಿಸಿತು.
ಆರ್‌ಬಿಐ ನಿಯಮ ಒಪ್ಪಿದ ಸುಪ್ರೀಂ: ಆರ್‌ಬಿಐ ಮತ್ತು ಕೇಂದ್ರ ಸರ್ಕಾರಕ್ಕೆ ನೋಟುಗಳ ಮೇಲೆ ನಿರ್ದಿಷ್ಟ ಮಟ್ಟದ ನಂಬಿಕೆ ಇರುವುದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಆರ್‌ಬಿಐ ಯಾವುದೇ ದಾಖಲೆ ಬೇಕಿಲ್ಲ ಎಂಬುದನ್ನು ಒಪ್ಪಲಾಗುವುದು. ಹೀಗಾಗಿ ವಿನಿಮಯಕ್ಕೆ ಅವಕಾಶ ನೀಡುತ್ತೇವೆ. ಅಲ್ಲದೇ, ನ್ಯಾಯಾಲಯಗಳು ಇಂತಹ ವಿಷಯಗಳಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.
ವಿಚಾರಣೆಯ ಆರಂಭದಲ್ಲಿ ಅರ್ಜಿದಾರ, ವಕೀಲರಾದ ಅಶ್ವಿನಿ ಉಪಾಧ್ಯಾಯ ಅವರನ್ನು ಉದ್ದೇಶಿಸಿ ಹೇಳಿದ ಸಿಜೆಐ ಅವರು, 'ನೀವು 2000 ಅಥವಾ 500 ರೂಪಾಯಿಯ ನೋಟು ತೆಗೆದುಕೊಂಡು ಅಂಗಡಿಯವರಿಗೆ ನೀಡಿದಾಗ, ಆತ ನಿಮ್ಮ ಐಡೆಂಟಿಯನ್ನು ಕೇಳುತ್ತಾನೆಯೇ ಎಂದು ಪ್ರಶ್ನಿಸಿದರು. ನೋಟುಗಳ ಉದ್ದೇಶವನ್ನು ಪೂರೈಸಲಾಗಿದೆ ಎಂದು ಆರ್‌ಬಿಐ ಹೇಳಿದೆ. ಮೇಲಾಗಿ ನೋಟು ರದ್ದು ಮಾಡಿಲ್ಲ, ಕಾನೂನಾತ್ಮಕವಾಗಿ ಹಿಂತೆಗೆದುಕೊಳ್ಳಲಾಗಿದೆ ಅಷ್ಟೇ' ಎಂದು ಹೇಳಿದರು.
ಹಣದ ಮೂಲವೇ ಗೌಣ: ಆಗ ಅರ್ಜಿದಾರರು, ಇದು 100 ಅಥವಾ 50 ರೂಪಾಯಿ ಕರೆನ್ಸಿ ಅಲ್ಲ. ಮಧ್ಯಮ ಅಥವಾ ಉನ್ನತ ವರ್ಗದ ಜನರು ಮಾತ್ರ ಬಳಸುವ 2000 ರೂಪಾಯಿ ನೋಟು ಆಗಿದೆ. ಯಾವುದೇ ದಾಖಲೆ ಇಲ್ಲದೇ ಹಿಂಪಡೆದು, ಬ್ಯಾಂಕ್ಗಳಲ್ಲಿ ಠೇವಣಿ ಮಾಡಲು ಸೂಚಿಸಲಾಗಿದೆ. ಇದು ಹಣದ ಹರಿವಿನ ಮೂಲದ ಪ್ರಶ್ನೆಯೇ ಉದ್ಭವಿಸುವುದಿಲ್ಲವಲ್ಲ ಎಂದು ವಾದಿಸಿದರು.
ವಾದ ಮಂಡನೆಯ ಬಳಿಕ ಸುಪ್ರೀಂ ಕೋರ್ಟ್ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿತು. ದೆಹಲಿ ಹೈಕೋರ್ಟ್‌ನ ಮೇ 29 ರ ತೀರ್ಪನ್ನು ಎತ್ತಿಹಿಡಿಯಿತು. ಇದಕ್ಕೂ ಮೊದಲು ಈ ಕುರಿತು ಸಲ್ಲಿಸಿದ ಅರ್ಜಿಯ ತುರ್ತು ವಿಚಾರಣೆಯನ್ನು ಜೂನ್ 1 ರಂದು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.
ಇದನ್ನೂ ಓದಿ: ಸೆಂಟ್ರಲ್ ಗವರ್ನಮೆಂಟ್ ಸುಗ್ರೀವಾಜ್ಞೆಗೆ ತಡೆ ನೀಡಲು ನಿರಾಕರಿಸಿದ ಸುಪ್ರೀಂ: ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ