ಹೈದರಾಬಾದ್ ಡೆಸ್ಕ್: ವಾಹನ ಸವಾರರ ಸಹಾಯಕ್ಕಾಗಿ ಜಾರಿ ಮಾಡಿದ್ದ ಡಿಜಿಲಾಕರ್ ಸೇವೆಯನ್ನು ಕೇಂದ್ರ ಸರ್ಕಾರ ಇನ್ನಷ್ಟು ಸುಲಭಗೊಳಿಸಿದೆ. ಡಿಜಿಲಾಕರ್ ಅನ್ನು ಸುಲಭವಾಗಿ ಪಡೆದುಕೊಳ್ಳಲು ವಾಟ್ಸ್ಆ್ಯಪ್ ಮೂಲಕ ಸಂದೇಶ ಕಳುಹಿಸಿ ಪಡೆದುಕೊಳ್ಳಬಹುದು ಎಂದು ತಂತ್ರಜ್ಞಾನ ಮತ್ತು ಐಟಿ ಇಲಾಖೆ ತಿಳಿಸಿದೆ.
ಡಿಜಿಟಲೀಕರಣದ ಮೂಲಕ ಸರ್ಕಾರಿ ಸೇವೆಗಳ ಲಭ್ಯತೆಯನ್ನು ಇನ್ನಷ್ಟು ಸರಾಗಗೊಳಿಸಲು ಡಿಜಿಲಾಕರ್ ಸೇವೆಯನ್ನು ಜನರು ಇದೀಗ ವಾಟ್ಸ್ಆ್ಯಪ್ ಮೂಲಕವೂ ಪಡೆದುಕೊಳ್ಳಬಹುದಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಪ್ರಕಟಿಸಿದೆ. MyGov ಹೆಲ್ಪ್‌ಡೆಸ್ಕ್ ಈಗ ಡಿಜಿಲಾಕರ್ ಸೇವೆಗಳಿಂದ ಪ್ರಾರಂಭವಾಗುವ ಸಮಗ್ರ ನಾಗರಿಕ ಬೆಂಬಲ ಮತ್ತು ಸಮರ್ಥ ಆಡಳಿತಕ್ಕಾಗಿ ಸೇವೆಗಳನ್ನು ನೀಡುತ್ತದೆ.
ಹೊಸ ಸೇವೆಯಿಂದ ಪಾನ್ ಕಾರ್ಡ್, ಚಾಲನಾ ಪರವಾನಗಿ, ಶೈಕ್ಷಣಿಕ ದಾಖಲಾತಿ, ಉತ್ತೀರ್ಣ ಪ್ರಮಾಣಪತ್ರ, ವಾಹನ ನೋಂದಣಿ ಪ್ರಮಾಣಪತ್ರ, ವಿಮಾ ಪಾಲಿಸಿ, ದ್ವಿಚಕ್ರ ವಾಹನ ಪರವಾನಗಿ, ಮಾರ್ಕ್ಸಕಾರ್ಡ್, ವಿಮಾ ಪಾಲಿಸಿ ದಾಖಲೆ ಸೇರಿದಂತೆ ಇತ್ಯಾದಿ ದಾಖಲೆಗಳನ್ನು ಡಿಜಿಲಾಕರ್ನಲ್ಲಿ ಸೇವ್ ಮಾಡಬಹುದಾಗಿದೆ.
ಸೇವೆ ಪಡೆಯುವುದು ಹೇಗೆ?: ವಾಟ್ಸ್ಆ್ಯಪ್ ಬಳಕೆದಾರರು ತಮ್ಮ ವಾಟ್ಸಾಪ್ ಸಂಖ್ಯೆಯಿಂದ +91 9013151515 ಸಹಾಯವಾಣಿಗೆ ನಮಸ್ತೆ ಅಥವಾ ಹಾಯ್ ಅಥವಾ ಡಿಜಿಲಾಕರ್ ಎಂದು ಟೈಪ್ ಮಾಡಿ ಕಳುಹಿಸುವ ಮೂಲಕ ಚಾಟ್‌ಬಾಟ್ ಅನ್ನು ಪಡೆದುಕೊಳ್ಳಬಹುದಾಗಿದೆ.
ಕೋವಿಡ್ ಮಹಾಮಾರಿ ಕಾರಣಕ್ಕಾಗಿ ಕೇಂದ್ರ ಸರ್ಕಾರ 2020 ರಲ್ಲಿ MYGOV ಹೆಲ್ಪ್‌ಡೆಸ್ಕ್ ಆರಂಭಿಸಿತ್ತು. ಇದನ್ನು ಕೊರೊನಾ ಹೆಲ್ಪ್‌ಡೆಸ್ಕ್ ಅಂತಲೂ ಕರೆಯುತ್ತಾರೆ. ಕೋವಿಡ್ ಕುರಿತ ಸುದ್ದಿ, ಲಸಿಕೆ ಮಾಹಿತಿ, ಲಸಿಕಾ ಪ್ರಮಾಣಪತ್ರ ಡೌನ್ಲೋಡ್ ಮಾಡಿಕೊಳ್ಳಲು ಇದು ಸಹಕಾರಿಯಾಗುತ್ತಿತ್ತು. ಇದೀಗ ಈ ಡೆಸ್ಕ್ ಡಿಜಿಲಾಕರ್ ಸೇವೆಗೂ ಬಳಕೆಯಾಗಲಿದೆ. ಡಿಜಿಲಾಕರ್ ಅನ್ನು ಈವರೆಗೂ 10 ಕೋಟಿ ಜನರು ನೋಂದಣಿ ಮಾಡಿಕೊಂಡಿದ್ದು, 500 ಕೋಟಿಗೂ ಅಧಿಕ ದಾಖಲೆಗಳನ್ನು ಅದರಲ್ಲಿ ಇಟ್ಟಿದ್ದಾರೆ.