ಹೈದರಾಬಾದ್ : ಪಾಕಿಸ್ತಾನದಲ್ಲಿ ಹಣದುಬ್ಬರ ಗಗನಕ್ಕೇರಿದೆ. ಆಹಾರ, ದಿನಬಳಕೆಯ ವಸ್ತುಗಳು ಸಿಗದೆ ಜನ ಕಂಗಾಲಾಗಿದ್ದಾರೆ. ಈಗ ಬೆಲೆಯೇರಿಕೆಯ ಪ್ರಭಾವ ಇತರ ಎಲ್ಲ ಕ್ಷೇತ್ರಗಳಿಗೂ ವ್ಯಾಪಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಕಾರುಗಳ ಬೆಲೆಗಳು ಸಹ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಸಾಮಾನ್ಯ ಜನರು ಕಾರು ಕೊಳ್ಳುವುದು ಕಷ್ಟವಾಗುತ್ತಿದೆ. ಇತ್ತೀಚೆಗೆ ಪಾಕಿಸ್ತಾನ ಸರ್ಕಾರವು ಕಾರುಗಳ ಸರಕು ಸೇವಾ ತೆರಿಗೆಯನ್ನು (ಜಿಎಸ್ಟಿ) ಹೆಚ್ಚಿಸಿದೆ. ಸರ್ಕಾರವು 1400 ಸಿಸಿ ಅಥವಾ ಅದಕ್ಕಿಂತ ಹೆಚ್ಚಿನ ಕಾರುಗಳ ಮೇಲಿನ ಸರಕು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಶೇ 18 ರಿಂದ ಶೇ 25 ಕ್ಕೆ ಹೆಚ್ಚಿಸಿದೆ. ಹೀಗಾಗಿ ಪಾಕಿಸ್ತಾನದಲ್ಲಿ ಕಾರುಗಳ ಬೆಲೆಗಳು ಗಗನಕ್ಕೇರುತ್ತಿವೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಮತ್ತೊಂದು ಕಂತಿನ ಸಾಲ ಪಡೆಯಬೇಕಾದರೆ ಪಾಕಿಸ್ತಾನ ಸರ್ಕಾರ, ಐಎಂಎಫ್ ಹಾಕಿರುವ ಷರತ್ತುಗಳನ್ನು ಪಾಲಿಸಲೇಬೇಕಿದೆ. ಅದರ ಪ್ರಕಾರ ಪಾಕ್ ಸರ್ಕಾರ ಈಗ ಎಲ್ಲ ವಸ್ತುಗಳ ಮೇಲೆ ತೆರಿಗೆ ಹೆಚ್ಚಿಸುತ್ತಿದೆ ಹಾಗೂ ಇದ್ದ ಎಲ್ಲ ಸಬ್ಸಿಡಿಗಳನ್ನು ತೆಗೆದು ಹಾಕುತ್ತಿದೆ. ಕಾರುಗಳ ವಿಚಾರಕ್ಕೆ ಬರುವುದಾದರೆ, ಪಾಕಿಸ್ತಾನದಲ್ಲಿ ಅನೇಕ ಬ್ರಾಂಡ್‌ಗಳ ಕಾರುಗಳು ಸಿಗುತ್ತವೆ. ಆದಾಗ್ಯೂ ಭಾರತದಲ್ಲಿ ಮಾರಾಟವಾಗುವ ಅನೇಕ ಕಾರು ಬ್ರ್ಯಾಂಡ್ಗಳು ಪಾಕಿಸ್ತಾನದಲ್ಲೂ ಮಾರಾಟವಾಗುತ್ತವೆ. ಭಾರತಕ್ಕೆ ಹೋಲಿಸಿದರೆ ಈ ಕಾರುಗಳ ಬೆಲೆ ಪಾಕಿಸ್ತಾನದಲ್ಲಿ ಎಷ್ಟು ಭಿನ್ನವಾಗಿವೆ ಎಂಬುದನ್ನು ನೋಡೋಣ.
ಮಾರುತಿ ಸುಜುಕಿ ಆಲ್ಟೊ : ಮಾರುತಿ ಸುಜುಕಿ ತನ್ನ ಅಗ್ಗದ ಕಾರು ಮಾರುತಿ ಸುಜುಕಿ ಆಲ್ಟೊ 800 ಅನ್ನು ಭಾರತದಲ್ಲಿ ರೂ 3.53 ಲಕ್ಷದ ಆರಂಭಿಕ ಬೆಲೆಗೆ (ಎಕ್ಸ್-ಶೋರೂಂ) ಮಾರಾಟ ಮಾಡುತ್ತದೆ. ಇದು 796 ಸಿಸಿ ಎಂಜಿನ್ ಹೊಂದಿದೆ. ಮತ್ತೊಂದೆಡೆ, ಪಾಕಿಸ್ತಾನದಲ್ಲಿ ಮಾರಾಟವಾಗುವ ಆಲ್ಟೊವನ್ನು ಸುಜುಕಿ ಆಲ್ಟೊ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ. ಇದರಲ್ಲಿ 660 ಸಿಸಿ ಎಂಜಿನ್ ಇದೆ. ಪಾಕಿಸ್ತಾನದಲ್ಲಿ ಈ ಕಾರಿನ ಬೆಲೆ 21.44 ಲಕ್ಷ ಪಾಕಿಸ್ತಾನಿ ರೂಪಾಯಿಗಳು. ಇದು ಭಾರತೀಯ ಕರೆನ್ಸಿ ಪ್ರಕಾರ ಸುಮಾರು 6.28 ಲಕ್ಷ ರೂಪಾಯಿಗಳು.
ಮಾರುತಿ ಸುಜುಕಿ ವ್ಯಾಗನ್ಆರ್ : ಮಾರುತಿ ಸುಜುಕಿ ವ್ಯಾಗನ್ಆರ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಕಾರಾಗಿದ್ದು, ಮಧ್ಯಮ ವರ್ಗದ ಕುಟುಂಬಗಳಿಗೆ ಇದು ತುಂಬಾ ಇಷ್ಟವಾಗಿದೆ. ಭಾರತದಲ್ಲಿ, ಇದು 2019 ರಲ್ಲಿ ಫೇಸ್‌ಲಿಫ್ಟ್ ಅಪ್ಡೇಟ್ ನೀಡಲಾಗಿತ್ತು ಮತ್ತು ಈಗ ಇದನ್ನು ರೂ. 5.52 ಲಕ್ಷದ ಆರಂಭಿಕ ಬೆಲೆಯಲ್ಲಿ (ಎಕ್ಸ್ ಶೋರೂಂ) ಮಾರಾಟ ಮಾಡಲಾಗುತ್ತಿದೆ. ಈ ಕಾರು ಪಾಕಿಸ್ತಾನದಲ್ಲಿ ಸುಜುಕಿ ವ್ಯಾಗನ್ಆರ್ ಹೆಸರಿನಲ್ಲಿ ಮಾರಾಟದಲ್ಲಿದೆ ಮತ್ತು ಈ ಕಾರನ್ನು 30.62 ಲಕ್ಷ ಪಾಕಿಸ್ತಾನಿ ರೂಪಾಯಿಗಳ ಆರಂಭಿಕ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದು ಭಾರತೀಯ ಕರೆನ್ಸಿಯಲ್ಲಿ ಸುಮಾರು 8.97 ಲಕ್ಷ ರೂಪಾಯಿ ಆಗುತ್ತದೆ.
ಹೋಂಡಾ ಸಿಟಿ ಸೆಡಾನ್ : ಭಾರತದಲ್ಲಿ ಪ್ರೀಮಿಯಂ ಸೆಡಾನ್‌ಗಳ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ ತನ್ನದೇ ಆದ ಸ್ಥಾನವನ್ನು ಹೊಂದಿದೆ. ಈ ಕಾರು ಭಾರತದಲ್ಲಿ ಹಲವು ವರ್ಷಗಳಿಂದ ಮಾರಾಟವಾಗುತ್ತಿದೆ ಮತ್ತು ಹೊಸ ನವೀಕರಣಗಳೊಂದಿಗೆ ಜನರು ಇದನ್ನು ಹೆಚ್ಚು ಇಷ್ಟಪಟ್ಟಿದ್ದಾರೆ. ಪಾಕಿಸ್ತಾನದಲ್ಲಿ ಕೂಡ ಹೋಂಡಾ ಸಿಟಿ ಕಾರು ಮಾರುಕಟ್ಟೆಯಲ್ಲಿದೆ. ಸೆಡಾನ್ ಅನ್ನು ಪಾಕಿಸ್ತಾನದಲ್ಲಿ 47.79 ಲಕ್ಷ ಪಾಕಿಸ್ತಾನಿ ರೂಪಾಯಿ ಆರಂಭಿಕ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದನ್ನು ಭಾರತದ ರೂಪಾಯಿಗೆ ಹೋಲಿಸಿದರೆ ಸರಿಸುಮಾರು 14 ಲಕ್ಷ ರೂಪಾಯಿ ಆಗುತ್ತದೆ. ಈ ಕಾರನ್ನು ಭಾರತದಲ್ಲಿ 11.52 ಲಕ್ಷ ರೂ (ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ.
ಕಿಯಾ ಕಾರ್ನೀವಲ್ : ದಕ್ಷಿಣ ಕೊರಿಯಾದ ಕಾರು ತಯಾರಕ ಕಿಯಾ ತನ್ನ ಐಷಾರಾಮಿ ಎಂಪಿವಿ ಕಿಯಾ ಕಾರ್ನಿವಲ್ ಅನ್ನು ಪಾಕಿಸ್ತಾನ ಮತ್ತು ಭಾರತದಲ್ಲಿ ಮಾರಾಟ ಮಾಡುತ್ತಿದೆ.ಭಾರತದಲ್ಲಿ ಕಿಯಾ ಕಾರ್ನಿವಲ್ ಆರಂಭಿಕ ಬೆಲೆ ರೂ 30.97 ಲಕ್ಷ (ಎಕ್ಸ್ ಶೋ ರೂಂ) ನಲ್ಲಿ ಮಾರಾಟವಾಗುತ್ತಿದ್ದರೆ, ಪಾಕಿಸ್ತಾನದಲ್ಲಿ ಈ ಕಾರನ್ನು ರೂ 1.56 ಕೋಟಿಗಳ ಆರಂಭಿಕ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದು ಭಾರತೀಯ ಕರೆನ್ಸಿಯಲ್ಲಿ 45.71 ಲಕ್ಷ ರೂಪಾಯಿ ಆಗುತ್ತದೆ.
ಟೊಯೋಟಾ ಫಾರ್ಚುನರ್ : ಟೊಯೊಟಾ ಫಾರ್ಚುನರ್ ಬಗ್ಗೆ ನೋಡುವುದಾದರೆ, ಭಾರತದಲ್ಲಿ ಫಾರ್ಚುನರ್ ಬೆಲೆ ರೂ.32.59 ಲಕ್ಷದಿಂದ ಮತ್ತು ಫಾರ್ಚುನರ್ ಲೆಜೆಂಡರ್ ಬೆಲೆ ರೂ.42.82 ಲಕ್ಷದಿಂದ ಆರಂಭವಾಗುತ್ತದೆ. ಪಾಕಿಸ್ತಾನದಲ್ಲಿ ಫಾರ್ಚುನರ್ ಬೆಲೆ ರೂ. 1.58 ಕೋಟಿಯಿಂದ (ರೂ. 46.30 ಲಕ್ಷ) ಆರಂಭವಾಗುತ್ತದೆ. ಹಾಗೆಯೇ ಫಾರ್ಚುನರ್ ಲೆಜೆಂಡರ್ ಬೆಲೆ ರೂ.2.01 ಕೋಟಿಯಿಂದ ಪ್ರಾರಂಭವಾಗುತ್ತದೆ. (ರೂ. 58.99 ಲಕ್ಷ).
ಇದನ್ನೂ ಓದಿ : ದುಬಾರಿ ಕಾರು ತಯಾರಕ ಕಂಪನಿ ಲಂಬೋರ್ಗಿನಿ ಚಿತ್ತ ಸಣ್ಣ ನಗರಗಳತ್ತ